ವೀರಾಜಪೇಟೆ, ಜು. 24: ಕಳೆದ ಒಂದು ತಿಂಗಳಿಂದ 4 ಆನೆಗಳು ಒಂದು ಮರಿ ಆನೆ ದೇವಣಗೇರಿ, ಅಂಬಲ, ಮೈತಾಡಿ, ಚಾಮಿಯಾಲ ಮತ್ತು ಹಾಲುಗುಂದ ಗ್ರಾಮಗಳ ತೋಟದಲ್ಲಿ ಬಿಡಾರ ಹೂಡಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡಿಸುವದರಲ್ಲೆ ಕಾಲ ತಳ್ಳುತ್ತಿದ್ದಾರೆ,

ಕಳೆದ ಒಂದು ತಿಂಗಳಿಂದ 4 ಆನೆಗಳು ರಸ್ತೆ ಬದಿಯಲ್ಲೆ ಓಡಾಡುತ್ತಿದ್ದು, ಜನರು ಜೀವ ಭಯದಿಂದ ಓಡಾಡುತ್ತಿದ್ದಾರೆ. ಬೈರಂಬಾಡ ಕಡೆಯಿಂದ ಬಂದ ಆನೆಗಳು ಸಿಕ್ಕ ತೋಟಗಳಿಗೆ ನುಗ್ಗಿ ಮೇವಿಗಾಗಿ ಕಾಫಿ ಗಿಡಗಳನ್ನು, ಗದ್ದೆಯಲ್ಲಿ ನಾಟಿಗೆ ಸಿದ್ಧವಾದ ಪೈರನ್ನು ಧ್ವಂಸಗೊಳಿಸಿವೆ, ಸಂಜೆಯಾಗುತ್ತಿದಂತೆ ರಸ್ತೆ ಬದಿಗೆ ಬಂದು ರಸ್ತೆಗೆ ಹೊಂದಿಕೊಂಡಿರುವ ತೋಟದಲ್ಲಿ ಬಾಳೆ, ತೆಂಗು ಗಿಡಗಳನ್ನು ಹಾಳುಮಾಡುತ್ತಿವೆ.

ಹಾಲುಗುಂದ ಗ್ರಾಮದ ದಿವಾಕರ್ ಅವರ ಗದ್ದೆಯಲ್ಲಿದ್ದ ಪೈರನ್ನು ಹಾಳುಮಾಡಿದ್ದು, ಮೈತಾಡಿ ಗ್ರಾಮದ ಕುಂಞರ ಸುನು, ಚೆನ್ನಪ್ಪ, ಚಪ್ಪಂಡ ಮತ್ತು ಐಚ್ಚೆಟ್ಟಿರ ಕುಟುಂಬಸ್ಥರು ಸೇರಿದಂತೆ ಹಲವು ಮಂದಿಯ ತೋಟದಲ್ಲಿ ಓಡಾಡುತ್ತಿದ್ದು, ತೋಟವನ್ನು ಹಾಳುಮಾಡಿವೆ. ನಿನ್ನೆ ಮೈತಾಡಿಯ ಭಟ್ಟಮಕ್ಕಿ ಬಳಿ ರಸ್ತೆಗೆ ಹೊಂದಿಕೊಂಡಿರುವ ದೇವರ ಕಾಡಿಗೆ ಬೆಳ್ಳಂಬೆಳಿಗ್ಗೆ ಲಗ್ಗೆ ಇಟ್ಟಿವೆ. ಬಸ್‍ಗೆ ನಿಂತ ಜನರು ರಸ್ತೆಯಲ್ಲಿ ಆನೆ ಕಂಡು ಗಾಬರಿಯಿಂದ ಓಡಿದ್ದಾರೆ, ಮಕ್ಕಳನ್ನು ಶಾಲೆಗೆ ಕಳುಹಿಸಲು, ಕೂಲಿ ಕಾರ್ಮಿಕರು ತೋಟಕ್ಕೆ ಮತ್ತು ಗದ್ದೆಗೆ ತೆರಳಲು ಆತಂಕ ಪಡುತ್ತಿದ್ದಾರೆ,

ಕಳೆದ ಒಂದು ತಿಂಗಳಿಂದ ಅರಣ್ಯ ಸಿಬ್ಬಂದಿಗಳು ಬಂದು ಸಂಜೆಯವರೆಗೆ ಪಟಾಕಿ ಒಡೆದು ಮತ್ತೊಬ್ಬರ ತೋಟಕ್ಕೆ ಸೇರಿಸಿ ಹೋಗುತ್ತಿದ್ದಾರೆ ವಿನಃ ಕಾಡಿಗಟ್ಟಲು ಸಾಧ್ಯವಾಗಿಲ್ಲ. ಗ್ರಾಮಸ್ಥರು ಪ್ರತಿದಿನ ಅರಣ್ಯ ಸಿಬ್ಬಂದಿಯೊಂದಿಗೆ ಆನೆಯನ್ನು ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಆನೆಗಳನ್ನು ಕಾಡಿಗಟ್ಟುವ ಯಾವದೇ ಲಕ್ಷಣ ಕಾಣುತ್ತಿಲ್ಲ, ಪ್ರಾಣ ಹಾನಿ ಆಗುವವರೆಗೂ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ.

ಒಂದೆಡೆ ಮಳೆಯಿಂದ ತೋಟದಲ್ಲಿ ಕಾಫಿ ಉದುರುತ್ತಿದ್ದು, ಅವಧಿಗೂ ಮುನ್ನ ಮಳೆಯಾದುದ ರಿಂದ ತೋಟದ ಕೆಲಸವಾಗಿಲ್ಲದ ಕಾರಣ ತೋಟಕ್ಕೆ ಹೋಗೋಣ ವೆಂದರೆ ಆಗುತ್ತಿಲ್ಲ. ಇತ್ತಕಡೆ ಗದ್ದೆಯಲ್ಲಿ ನಾಟಿಗೆ ಪೈರು ಬಂದಿದೆ, ಗದ್ದೆ ಕೆಲಸ ಮಾಡೋಣವೆಂದರೆ, ಆನೆಗಳಿಂದ ಮನೆಯಿಂದ ಹೊರಗೆ ಬರದಂತಾಗಿದೆ.