ಮಡಿಕೇರಿ, ಜು. 24: ಸರ್ಕಾರದ ಅಭಿಯೋಜಕನೆಂಬ ಹುದ್ದೆ ರಾಜಕೀಯ ರಹಿತವಾದ ಹುದ್ದೆಯಾಗಿದ್ದು, ವೃತ್ತಿ ಧರ್ಮ ಪಾಲನೆಗೆ ಮಾತ್ರ ಹೆಚ್ಚಿನ ಒತ್ತು ನೀಡುವದಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಅಭಿಯೋಜಕರಾಗಿ ನಿನ್ನೆ ನೇಮಕಗೊಂಡಿರುವ ಕೊಡ್ಲಿಪೇಟೆ ಮೂಲದವರಾಗಿದ್ದು, ಬೆಂಗಳೂರು ಹೈಕೋರ್ಟ್ ವಕೀಲರಾಗಿರುವ ಹೆಚ್.ಎಸ್. ಚಂದ್ರಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘&divlusmn;ಕ್ತ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ತಾನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸರ್ಕಾರಿ ಅಭಿಯೋಜಕನಾಗಿ ಮೊದಲ ಬಾರಿಗೆ ನೇಮಕಗೊಂಡಿದ್ದೆ. ಬಳಿಕ ಧರಂಸಿಂಗ್ ಅವರು ಸಿಎಂ ಆಗಿದ್ದಾಗ, ನಂತರ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರದ ವಕೀಲನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ನಾಲ್ಕನೇ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಭಿಯೋಜಕನಾಗಿ ಕೆಲಸ ಮಾಡಲು ಅವಕಾಶ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಅಲ್ಪ ಅಂತರದಲ್ಲಿ ಸೋಲು ಕಂಡಿದ್ದೆ. ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‍ನ ಅಭ್ಯರ್ಥಿಯಾಗಿದ್ದ ತಾನು ದಿಢೀರನೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕಾಗಿ ಸ್ಪರ್ಧೆಯಿಂದ ಸ್ವತಃ ಹಿಂದೆ ಸರಿದಿದ್ದೆ ಎಂದ ಚಂದ್ರಮೌಳಿ ರಾಜಕೀಯವೇ ಬೇರೆ ವೃತ್ತಿಯೆ ಬೇರೆ. ರಾಜಕೀಯ ತನಗೆ ವೃತ್ತಿಯಲ್ಲ; ಪ್ರವೃತ್ತಿ, ಆದರೆ ವಕೀಲ ವೃತ್ತಿ

(ಮೊದಲ ಪುಟದಿಂದ) ತನಗೆ ಪ್ರಿಯವಾದದ್ದು, ಆದ್ದರಿಂದ ರಾಜಕೀಯ ಭವಿಷ್ಯದ ಕುರಿತು ಯಾವದೇ ಆತಂಕವಿಲ್ಲ ಎಂದರು. ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ ಇವರುಗಳು ತನ್ನ ಅನುಭವದ ಆಧಾರದ ಮೇಲೆ ನನ್ನ ಹೆಸರನ್ನು ಅಭಿಯೋಜಕ ಹುದ್ದೆಗೆ ಶಿಫಾರಸ್ಸು ಮಾಡಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಒಟ್ಟಾಗಿ ತನ್ನನ್ನು ಸಮ್ಮಿಶ್ರ ಸರ್ಕಾರದ ಅಭಿಯೋಜಕನಾಗಿ ನೇಮಕಮಾಡಿದ್ದಾರೆ ಹೊರತು ಯಾವದೇ ಪ್ರಭಾವ ಬೀರಿ ಈ ಹುದ್ದೆ ಪಡೆದಿಲ್ಲ ಎಂದು ಚಂದ್ರಮೌಳಿ ಸ್ಪಷ್ಟ ನುಡಿಯಾಡಿದರು.

ಸಮಾಜದ ಸ್ವಾಸ್ಥ್ಯಕ್ಕಾಗಿ ಎಲ್ಲರೂ ಕಾನೂನನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರದ ಅಭಿಯೋಜಕ ಹುದ್ದೆಯು ಸಚಿವ ಸ್ಥಾನದಷ್ಟೆ ಘನತೆ ಹೊಂದಿದೆ. ಅಗತ್ಯ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಆದರೆ ತಾನು ಸರ್ಕಾರದಿಂದ ಯಾವದೇ ಸೌಲಭ್ಯ ಬಯಸಲಾರೆ; ಸಿಕ್ಕಂತಹ ಅವಕಾಶವನ್ನು ಸಮರ್ಪಕವಾಗಿ ನಿರ್ವಹಿಸುವದೊಂದೆ ನನ್ನ ಗುರಿ ಎಂದರು. ಸರ್ಕಾರದಲ್ಲಿ ಎಲ್ಲಾ ತರದ ಕ್ರಿಮಿನಲ್ ಪ್ರಕರಣಗಳು ತನ್ನ ಮೂಲಕವೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನಲ್ಲಿ ನಡೆಯಬೇಕಿದ್ದು, ಸರ್ಕಾರಕ್ಕೆ ಕಾನೂನು ಸಲಹೆ ನೀಡುವದು ತನ್ನ ಹುದ್ದೆಯ ಜವಾಬ್ದಾರಿಯಾಗಿರುತ್ತದೆ ಎಂದು ಚಂದ್ರಮೌಳಿ ತಿಳಿಸಿದರು.