ಕುಶಾಲನಗರ, ಜು. 24: ಲಾರಿ ಮಾಲೀಕರ ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಒದಗಿಸುವಂತೆ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆ. ಗಣೇಶ್, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಹಮ್ಮಿಕೊಂಡಿರುವ ಲಾರಿ ಮುಷ್ಕರ 4ನೇ ದಿನಕ್ಕೆ ಕಾಲಿರಿಸಿದೆ. ಸೆಸ್ ವಿಧಿಸುವ ಮೂಲಕ ಡೀಸೆಲ್ ದರ ಏರಿಸಲಾಗಿದೆ. ಎಲ್ಲೆಂದರಲ್ಲಿ ನಡೆಯುತ್ತಿರುವ ಟೋಲ್ ಶುಲ್ಕ, ಸರಕು ಸಾಗಾಟ ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ಮೊತ್ತ ಹೆಚ್ಚಳ, ತೆರಿಗೆ ಹೆಚ್ಚಳ ಲಾರಿ ಮಾಲೀಕರನ್ನು ಕಂಗೆಡಿಸಿದೆ. ಕೂಡಲೇ ಸಂಬಂಧಿಸಿದ ಇಲಾಖೆಗಳು, ರಾಜ್ಯ ಹಾಗೂ ಕೇಂದ್ರ ಸರಕಾರ ನಮ್ಮ ಸಂಕಷ್ಟಗಳ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸುವಂತೆ ಅವರು ಕೋರಿದರು. ದೇಶಾದ್ಯಂತ ತೊಡಗಿರುವ 350 ಕ್ಕೂ ಅಧಿಕ ಟೋಲ್ ಕೇಂದ್ರಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ ಅವರು, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಡೆಯುತ್ತಿರುವ ಹೋರಾಟದಲ್ಲಿ ಜಿಲ್ಲೆಯಾದ್ಯಂತ ಸರಕು ಸಾಗಣೆ ವಾಹನಗಳ ಮಾಲೀಕರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುವಂತೆ ಗಣೇಶ್ ಕೋರಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಟಿ. ಗಣಪತಿ, ಕಾರ್ಯದರ್ಶಿ ಜಿ.ಎ. ಲೋಕೇಶ್, ಖಜಾಂಚಿ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ರಾಮದಾಸ್ ಇದ್ದರು.