ಸುಂಟಿಕೊಪ್ಪ, ಜು. 24: ಜನತೆಯ ಮುಗ್ಧತೆಯನ್ನು ಅರಿತುಕೊಂಡೇ ಕೆಲವು ವಂಚಕರು ಮೋಸ ವಂಚನೆಯನ್ನು ಎಸಗುತ್ತಿರು ತ್ತಾರೆ ಯುವಜನತೆ ತಿಳಿದು ವಂಚಕರ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದು ವಿಚಾರವಾದಿ ಹಾಗೂ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ನರೇದ್ರ ನಾಯಕ್ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕೊಡಗು ಜಿಲ್ಲಾ ಸಮಿತಿ, ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಸಂತ ಮೇರಿ ವಿದ್ಯಾಸಂಸ್ಥೆ ಹಾಗೂ ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಂತ ಮೇರಿ ಸಭಾಂಗಣದಲ್ಲಿ ‘ವೈಜ್ಞಾನಿಕ ಮನೋಭಾವನೆ ಬೆಳವಣಿಗೆ’ ಕುರಿತ ಮಾಹಿತಿ ಹಾಗೂ ಪವಾಡ ರಹಸ್ಯ ಬಯಲು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನ ಮೋಸ ಹೋದಂತೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಜಾಗೃತೆ ವಹಿಸಬೇಕು ಎಂದರಲ್ಲದೇ, ಯಾವ ರೀತಿಯಲ್ಲಿ ಜನರನ್ನು ಮೂಡನಂಬಿಕೆಗಳ ಮೂಲಕ ಮರುಳು ಮಾಡುತ್ತಾರೆ ಎಂಬದನ್ನು ಪ್ರಾಯೋಗಿಕವಾಗಿ ತೋರಿಸುವದ ರೊಂದಿಗೆ ಚಪ್ಪಾಳೆ ಗಿಟ್ಟಿಸಿಕೊಂಡರು.
ಶೂನ್ಯದಲ್ಲಿ ಬೂದಿ, ಶೂನ್ಯದಲ್ಲಿ ಬೆಂಕಿ, ಬರಿ ಕೈಯಲ್ಲಿ ಶಸ್ತ್ರ ಚಿಕಿತ್ಸೆ, ಮೊಳೆಗಳ ಮೇಲೆ ಮಕ್ಕಳನ್ನು ನಿಲ್ಲಿಸಿ ವೈಜ್ಞಾನಿಕ ಕಾರಣಗಳನ್ನು ತಿಳಿ ಹೇಳುವದರೊಂದಿಗೆ ಮೂಡ ನಂಬಿಕೆಗಾಗಿ ಮಕ್ಕಳ, ಮಹಿಳೆಯರ ಬಲಿಯಾಗುತ್ತಿದೆ. ಕುಟುಂಬಗಳು ಛಿಧ್ರವಾಗುತ್ತಿದೆ ಇದನ್ನು ತಪ್ಪಿಸ ಬೇಕಾದರೆ ಯುವ ಜನಾಂಗದಿಂದಲೇ ಮಾತ್ರ ಸಾಧ್ಯ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ಎಡ್ವರ್ಡ್ ವಿಲಿಯಂ ಸಾಲ್ಡಾನ ವಹಿಸಿದ್ದರು.
ಕ.ರಾ.ವಿ.ಪ.ನ ಜಿಲ್ಲಾ ಘಟಕದ ಅಧ್ಯಕ್ಷ ಫಿಲಿಪ್ ವಾಸ್, ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಪಿ.ಯು. ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸಂತ ಮೇರಿ ಪಿಯು ಕಾಲೇಜಿನ ಪ್ರಾಚಾರ್ಯ ಪಿ. ಸೆಲ್ವರಾಜು, ಹಿರಿಯ ಪತ್ರಕರ್ತ ವಹೀದ್ ಜಾನ್ ಇತರರು ಇದ್ದರು.
ಫಿಲಿಪ್ ವಾಸ್ ಸ್ವಾಗತಿಸಿ, ಈಶ ನಿರೂಪಿಸಿ, ಸೆಲ್ವರಾಜು ವಂದಿಸಿದರು.