ಮಡಿಕೇರಿ, ಜು. 24: ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ವೇತನವನ್ನೇ ಪಡೆಯಲಾಗ ದಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯುವದಾಗಿ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅನುದಾನಿತ ಪ್ರೌಢಶಾಲೆಗಳಲ್ಲಿ ತರಗತಿಯಲ್ಲಿ 25 ಮಕ್ಕಳು ಇರಲೇಬೇಕೆಂಬ ನಿಯಮವನ್ನು ಸಡಿಲಿಸಬೇಕಾಗಿದೆ. ಈ ಕಾರಣಕ್ಕಾಗಿ ಬೋಧಿಸಿದ ಶಿಕ್ಷಕರ ವೇತನವನ್ನು ತಡೆಹಿಡಿದಿರುವದು ಉಚಿತವಲ್ಲ. ತಡೆಹಿಡಿಯಲ್ಪಟ್ಟಿರುವ ಶಾಲೆಗಳ ವೇತನವನ್ನು ಬಿಡುಗಡೆ ಮಾಡಲು ಸೂಚಿಸಲಾಗುವದು. ಗಿರಿಭತ್ಯೆಯನ್ನು ಮಡಿಕೇರಿ ಪಟ್ಟಣಕ್ಕೆ ಮಾತ್ರ ನೀಡಲಾಗುತ್ತಿರುವದು ಸಮಂಜಸವಲ್ಲ. ಹಿರಿಯ ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಬಹುಪಾಲು ಪ್ರದೇಶ ಗುಡ್ಡಗಾಡಿನಿಂದ ಆವೃತ್ತವಾಗಿದೆ. ಈ ಸೌಲಭ್ಯ ಜಿಲ್ಲೆಯ ಎಲ್ಲ ಶಿಕ್ಷಕರಿಗೂ ವಿಸ್ತರಿಸಬೇಕು. ಎನ್.ಪಿ.ಎಸ್. ಹಾಗೂ ಪಿಂಚಣಿ ವಂಚಿತ ನೌಕರರ ಹೋರಾಟದ ಬಗ್ಗೆ ತಿಳಿದಿದೆ. ಇದನ್ನು ಮೇಲ್ಮಟ್ಟದಲ್ಲಿ ಪ್ರಸ್ತಾಪಿಸಲಾಗುತ್ತದೆ. ಈಗಾಗಲೇ ಪ್ರತಿ ತರಗತಿಯ ವಿದ್ಯಾರ್ಥಿಗಳ ಮಿತಿಯನ್ನು 70 ರಿಂದ 50ಕ್ಕೆ ಇಳಿಸಲಾಗಿದೆ. 2008 ರ ನಂತರ ನೇಮಕಾತಿ ಹೊಂದಿದವರಿಗೆ ವಿಶೇಷ ಭತ್ಯೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಬಡ್ತಿಗೆ ಸಂಬಂಧಿಸಿದಂತೆ ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಶಿಕ್ಷಕರು ಭೇಟಿ ಕೊಟ್ಟಾಗ ಅವರನ್ನು ಗೌರವದಿಂದ ಕಾಣುವಂತೆ ಹಾಗೂ ಇಲಾಖೆ ಲಂಚ ಮುಕ್ತ ವಾಗಿರುವಂತೆ ನೋಡಿ ಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿಕ್ಷಕರು ಸಮಸ್ಯೆಗಳಿದ್ದಾಗ ತಮ್ಮನ್ನು ನೇರವಾಗಿ ಸಂಪರ್ಕಿಸಲು ಕರೆ ನೀಡಿದರು.
ಶಿಕ್ಷಕರ ವಿವಿಧ ಸಮಸ್ಯೆಗಳ ಕುರಿತು ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್ ಮನವಿ ಸಲ್ಲಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷ ಮಹಬೂಬ್ ಸಾಬ್, ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಪರಿಹರಿಸುವಂತೆ ವಿನಂತಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳ, ಮಡಿಕೇರಿ ಬಿಇಒ ಗಾಯತ್ರಿ, ಸೋಮವಾರಪೇಟೆ ಬಿ.ಇ.ಒ ನಾಗರಾಜಯ್ಯ, ವೀರಾಜಪೇಟೆ ಬಿ.ಇ.ಒ. ಲೋಕೇಶ್, ಅಕ್ಷರ ದಾಸೋಹ ನಿರ್ದೇಶಕ ಪಾಂಡು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಕುಂತಿ ಬೋಪಯ್ಯ, ಪ್ರಬಾರ ಪಿ.ಯು. ಉಪ ನಿರ್ದೇಶಕ ಕೆಂಚಪ್ಪ ಮೊದಲಾದವರು ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ಸೋಮವಾರಪೇಟೆ ಅಧ್ಯಕ್ಷ ಧರ್ಮಪ್ಪ, ವೀರಾಜಪೇಟೆ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಟಿ. ಚಂದನ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ಕಾರ್ಯದರ್ಶಿ ನಾಗರಾಜು ನಿರೂಪಿಸಿದರು, ನಿರ್ದೇಶಕ ದಯಾನಂದ ಪ್ರಕಾಶ್ ನಿರೂಪಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಮನೋಹರ ನಾಯ್ಕ ವಂದಿಸಿದರು.