ಸುಂಟಿಕೊಪ್ಪ, ಜು. 24: ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್ ಅವರ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಶಿಕ್ಷಕರು ಹಲವಾರು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳಾದ, ಗುಡ್ಡಗಾಡು ಪ್ರದೇಶ ಹೊಂದಿರುವ ಕೊಡಗಿನಲ್ಲಿ ಕೇವಲ ಮಡಿಕೇರಿ ನಗರಕ್ಕೆ ಮಾತ್ರ ಸರ್ಕಾರದಿಂದ ಗಿರಿಭತ್ಯೆ ಸೌಲಭ್ಯ ನೀಡಲಾಗುತ್ತಿದೆ. ಅದನ್ನು ಜಿಲ್ಲಾ ವ್ಯಾಪ್ತಿಗೂ ವಿಸ್ತರಿಸಬೇಕು, ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರನ್ನು ಯಾವದೇ ನಿರ್ಬಂಧವಿಲ್ಲದೆ ಪಿಯು ಕಾಲೇಜಿಗೆ ನೇಮಿಸಿಕೊಳ್ಳಬೇಕು. ಶಿಕ್ಷಕರ ವರ್ಗಾವಣಾ ಕೌನ್ಸಿಲಿಂಗ್ ಮತ್ತು ಅದರ ಪ್ರಕ್ರಿಯೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂಬಿತ್ಯಾದಿ ಸಮಸ್ಯೆಗಳ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿ, ಈ ಹಿಂದೆ ಹಲವಾರು ಬಾರಿ ಸಮಸ್ಯೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದು, ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಆ ನಿಟ್ಟಿನಲ್ಲಿ ತಾವುಗಳು ಶಿಕ್ಷಕರ ಸಮಸ್ಯೆಯನ್ನು ಆದಷ್ಟು ಬೇಗನೆ ಪರಿಹರಿಸಬೇಕು ಹಾಗೂ ಆಗಸ್ಟ್‍ನಲ್ಲಿ ಕೊಡಗಿನಲ್ಲಿ ನಡೆಯಲಿರುವ ಶೈಕ್ಷಣಿಕ ಸಮ್ಮೇಳನಕ್ಕೂ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಸೋಮವಾರಪೇಟೆ ತಾಲೂಕು ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಕಾರ್ಯದರ್ಶಿ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಯಾನಂದ, ಮಡಿಕೇರಿ ತಾಲೂಕು ಅಧ್ಯಕ್ಷ ಮೆಹಬೂಬು, ಕಾರ್ಯದರ್ಶಿ ರವಿಕೃಷ್ಣ ಇತರರು ಇದ್ದರು.