ಗೋಣಿಕೊಪ್ಪ ವರದಿ, ಜು. 24: ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಕೇತ್ ಪೂವಯ್ಯ ಅವರ ನಿರ್ಧಾರ ಸ್ವಾಗತಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಕಾಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಹೇಳಿದರು.
ಸಂಕೇತ್ ಅವರ ನಿರ್ಧಾರವನ್ನು ಪ್ರತೀ ಕಾರ್ಯಕರ್ತರುಗಳು ಒಪ್ಪಿಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಪಕ್ಷದ ನಾಯಕ ದೇವೇಗೌಡ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಹಿಂಪಡೆಯಲು ಕೆಲವು ಮುಖಂಡರುಗಳೊಂದಿಗೆ ಮನೆಯಲ್ಲಿ ಸಭೆ ನಡೆಸಿಕೊಂಡು ತಂತ್ರಗಾರಿಕೆ ಮಾಡುತ್ತಿರುವದು ಸರಿಯಲ್ಲ ಎಂದು ಗೋಣಿಕೊಪ್ಪ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮಾಡಿದ ತಂತ್ರಗಾರಿಕೆಯಿಂದ ಅವರಿಗೆ ಹಿನ್ನಡೆಯಾಗಿದೆ. ಇನ್ನಾದರೂ ಪಕ್ಷಕ್ಕಾಗಿ ಸಂಘಟಿತರಾಗಲು ಸೇರಿಕೊಳ್ಳಲಿ. ಅವರ ಅಧ್ಯಕ್ಷ ಅವಧಿಯಲ್ಲಿ ನಮಗೆ ರಾಜ್ಯ ನಾಯಕರುಗಳು ಹುದ್ದೆ ನೀಡಿದ್ದರೂ ಕೂಡ ಅದನ್ನು ಅಂಗೀಕರಿಸಲಿಲ್ಲ. ಆದರೂ ಕುಟ್ಟದಿಂದ ಕರಿಕೆವರೆಗೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆವು ಎಂದರು.
ಮುಖಂಡ ದಯಾ ಚೆಂಗಪ್ಪ ಮಾತನಾಡಿ, ಅರುಣ್ ಮಾಚಯ್ಯ ಈ ಹಿಂದೆ ಪಕ್ಷದ ಪರವಾಗಿ ಚುನಾವಣೆ ಎದುರಿಸಿದ್ದಾಗ 32 ಸಾವಿರ ಮತ ಪಡೆದಿದ್ದರು. ಕೆ.ಬಿ. ಶಾಂತಪ್ಪ 18 ಸಾವಿರ ಮತ ಪಡೆದಿದ್ದರು. ಸಂಕೇತ್ ಪೂವಯ್ಯ ಈ ಚುನಾವಣೆಯಲ್ಲಿ 11 ಸಾವಿರ ಮತ ಮಾತ್ರ ಪಡೆದಿದ್ದರು. ಇವರ ವರ್ಚಸ್ಸು ಮತ ಪಡೆಯಲು ತೊಂದರೆ ಆಯಿತು. ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ಮತ ಕೇಳದೆ ಪಕ್ಷಕ್ಕೆ ಹಿನ್ನಡೆ ಉಂಟಾಗಲು ಕಾರಣ ಆಯಿತು ಎಂದರು.
ವಕ್ತಾರ ಎಂ.ಟಿ. ಕಾರ್ಯಪ್ಪ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ರಾಜ್ಯ ನಾಯಕರುಗಳಿಗೆ ಸಮಸ್ಯೆಗಳ ಪಟ್ಟಿ ನೀಡಲಾಗಿದೆ. ರಾಜ್ಯ ಸರ್ಕಾರದ ಅನುದಾನ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಪೊನ್ನಂಪೇಟೆ ಉಪ ನೋಂದಣಿ ಕಚೇರಿ, ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗಿದೆ. ಸಚಿವ ಜಿ.ಟಿ. ದೇವೇಗೌಡ ಸ್ಥಾಪನೆಗೆ ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ. ತಾಲೂಕು ಘೋಷಣೆಗೆ ಮುಂದಿನ ಬಜೆಟ್‍ನಲ್ಲಿ ಯೋಜನೆ ರೂಪಿಸಲು ಒತ್ತಾಯಿಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ಬೂತ್ ಮಟ್ಟದಲ್ಲಿ ಸಂಘಟಿಸಲಾಗುವದು ಎಂದರು.
ಹಿರಿಯ ಮುಖಂಡ ಮನೆಯಪಂಡ ಬೆಳ್ಯಪ್ಪ ಮಾತನಾಡಿ, ಅವರ ಅಧಿಕಾರ ಅವಧಿಯಲ್ಲಿ ನಾವು ಉತ್ತಮ ಸಹಕಾರ ನೀಡಿದ್ದೇವೆ. ಆದರೆ, ಅವರು ನಮ್ಮನ್ನು ಜೊತೆಯಲ್ಲಿ ಪಕ್ಷ ಸಂಘಟನೆಯಲ್ಲಿ ಕರೆದುಕೊಂಡು ಹೋಗಲು ಹಿಂದೇಟು ಹಾಕಿರುವದು ಸರಿಯಲ್ಲ ಎಂದು ಆರೋಪಿಸಿದರು. ಮುಖಂಡ ಕರ್ತಮಾಡ ನರೇಂದ್ರ ಉಪಸ್ಥಿತರಿದ್ದರು.