ನಾಪೋಕ್ಲು, ಜು. 24: ಮೀನುಗಳ ಸಂತಾನೋತ್ಪತ್ತಿಯ ಅವಧಿಯಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿರುವ ಹಿನ್ನೆಲೆ ಇದೀಗ ಹೊಳೆ ಮೀನುಗಳಿಗೆ ಭಾರೀ ಬೇಡಿಕೆ ಕಂಡು ಬರುತ್ತಿದ್ದು, ಮಾರಾಟವು ಜೋರಾಗಿ ನಡೆಯುತ್ತಿದೆ.

ಮುಂಗಾರಿನ ಎರಡು ತಿಂಗಳ ಕಾಲ ಸಮುದ್ರದಲ್ಲಿ ಮೀನು ಹಿಡಿಯುವದನ್ನು ನಿರ್ಬಂಧಿಸಿರುವದರಿಂದ ಮತ್ಸ್ಯ ಪ್ರೇಮಿಗಳಿಗೆ ಸಮುದ್ರದ ಮೀನು ದೊರಕುವದು ಕಡಿಮೆಯಾಗಿದೆ. ಆಗೊಮ್ಮೆ-ಈಗೊಮ್ಮೆ ಶೀಥಲೀಕರಿಸಿದ ಸಮುದ್ರ ಮೀನುಗಳಷ್ಟೆ ದೊರಕುತ್ತಿದೆ.

ಇದೀಗ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪಟ್ಟಣ ಪ್ರದೇಶಗಳ ಅಲ್ಲಲ್ಲಿ ಗೋರೂರು, ಕೆ.ಆರ್. ನಗರ. ಹಾರಂಗಿ ಅಣೆಕಟ್ಟು ವ್ಯಾಪ್ತಿಯಲ್ಲಿ ಹಿಡಿದ ಭಾರೀ ಗಾತ್ರದ ರೊವ್, ಕಾಟ್ಲಾ, ಬಾಳೆ, ಪಾಂಪ್ಲೆಟ್, ಜಿಲೇಬಿ ಮೊದಲಾದ ಥಳಿಯ ಮೀನುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಒಂದೊಂದು ಮೀನು 1 ರಿಂದ 25 ಕೆ.ಜಿ. ತೂಕ ಹೊಂದಿರುವದು ವಿಶೇಷ.

ಮಡಿಕೇರಿಯ ಜ. ತಿಮ್ಮಯ್ಯ ವೃತ್ತದ ಟೋಲ್‍ಗೇಟ್, ವೂರುಕಟ್ಟೆ ಬಳಿ ಹೊಳೆ ಮೀನಿನ ಮಾರಾಟ ನಡೆಸುತ್ತಿದ್ದು, ಈ ಹೊಳೆ ಮೀನನ್ನು ಅಲ್ಲೇ ತುಂಡರಿಸಿ ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆ.ಜಿ. ಬೆಲೆ ರೂ. 180 ಗಳಿಂದ 250 ಗಳಾಗಿದೆ.

ಭಾರೀ ಗಾತ್ರದ ಮೀನುಗಳ ಹೊಟ್ಟೆಯಲ್ಲಿ ಸರಾಸರಿ 1 ರಿಂದ 4 ಕೆ.ಜಿ.ಗಳಷ್ಟು ಮೊಟ್ಟೆ ಇರುತ್ತದಂತೆ. ಇದನ್ನು ಪ್ರತ್ಯೇಕವಾಗಿ ಕೊಂಡೊಯ್ಯುವವರಿದ್ದಾರೆ.

ಮೀನುಗಳ ಸಂತಾನೋತ್ಪತ್ತಿ ಅವಧಿ ಎನ್ನುವ ಕಾರಣದಿಂದ ಸಮುದ್ರದಲ್ಲಿ ಮೀನು ಹಿಡಿಯುವದಕ್ಕೆ ನಿರ್ಬಂಧ ಹೇರಲಾಗಿದೆ. ಅದೇ ಅಣೆಕಟ್ಟುಗಳ ಹಿನ್ನೀರಿನಲ್ಲಿ ಈ ನಿರ್ಬಂಧವೇಕಿಲ್ಲ. ಹೊಳೆ ಮೀನುಗಳ ಸಂತಾನೋತ್ಪತ್ತಿಯ ಅವಧಿಯೂ ಇದೇ ಅಲ್ಲವೆ. ಇನ್ನೂ ಮೊಟ್ಟೆಗಳನ್ನು ಇಡದ ಮೀನುಗಳನ್ನು ಹಿಡಿದರೆ ಹಿನ್ನೀರಿನಲ್ಲಿ ಮತ್ಸ್ಯ ಸಂತತಿ ಕ್ಷೀಣಿಸುವದಿಲ್ಲವೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.

- ದುಗ್ಗಳ ಸದಾನಂದ