ಮಡಿಕೇರಿ, ಜು.26: ಕೊಡಗು ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ನಾಪೋಕ್ಲು ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ತಿಗೆ 30 ಲಕ್ಷ ರೂ., ಮಡಿಕೇರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ದುರಸ್ತಿಗೆ 20 ಲಕ್ಷ ರೂ., ವೀರಾಜಪೇಟೆಯ ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ತಿಗೆ 15 ಲಕ್ಷ ರೂ., ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ., ಒಟ್ಟಾರೆ ಶಿಕ್ಷಣ ಇಲಾಖೆಗೆ 75 ಲಕ್ಷ ರೂ. ಬಿಡುಗಡೆಯಾಗಿದೆ.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಕ್ಕಾಗಿ 25 ಲಕ್ಷ ರೂ., ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರಕ್ಕಾಗಿ 500 ಲಕ್ಷ ರೂ. ಒಟ್ಟಾರೆ ಆರೋಗ್ಯ ಇಲಾಖೆಗೆ 525 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕೊಣನೂರು-ಮಾಕುಟ್ಟ ಹೆದ್ದಾರಿ ರಸ್ತೆ ಸರಿಪಡಿಸಲು 600 ಲಕ್ಷ ರೂ., ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸಲು 2500 ಲಕ್ಷ ರೂ., ಎಂ.ಡಿ.ಆರ್. ರಸ್ತೆ ಮೇಲ್ದರ್ಜೆಗೇರಿಸಲು 3 ಸಾವಿರ ಲಕ್ಷ ರೂ. ಬಿಡುಗಡೆಯಾಗಿದ್ದು, ಒಟ್ಟಾರೆ ಲೋಕೋಪಯೋಗಿ ಇಲಾಖೆಗೆ 6,100 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.

ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ರಸ್ತೆ ಅಭಿವೃದ್ಧಿಗಾಗಿ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬರಡಿ ನಲ್ವತ್ತು ಎಕರೆ ಸಂಪರ್ಕ ಕಲ್ಪಿಸುವ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ., ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ತಾವೂರು ಅಚ್ಚಲುಬರಿಕೆ ಸಂಪರ್ಕ ಕಲ್ಪಿಸುವ 3 ಕಿ.ಮೀ. ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಮುತ್ತಾರುಮುಡಿ-ಕುಂಬಳದಾಳು ಸಂಪರ್ಕ ಕಲ್ಪಿಸುವ 4 ಕಿ.ಮೀ. ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ., ಒಟ್ಟಾರೆ ಗ್ರಾಮೀಣಾಭಿವೃದ್ಧಿ ಎಂಜಿನಿಯರ್ ವಿಭಾಗಕ್ಕೆ 1,206 ಲಕ್ಷ ರೂ. ಬಿಡುಗಡೆಯಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ವೀರಾಜಪೇಟೆ ಮಿನಿ ವಿಧಾನಸೌಧ ಕಟ್ಟಡದ ಮುಂದುವರಿದ ಕಾಮಗಾರಿಗೆ 600 ಲಕ್ಷ ರೂ., ಮಡಿಕೇರಿ ಮಿನಿವಿಧಾನಸೌಧದ ಎರಡನೇ ಹಂತದ ಕಾಮಗಾರಿಗೆ ಹೆಚ್ಚುವರಿಯಾಗಿ 500 ಲಕ್ಷ ರೂ. ಬಿಡುಗಡೆಯಾಗಿದೆ.

ನಗರದ ಜಿಲ್ಲಾಡಳಿತ ಭವನ ಬಳಿ ತಡೆಗೋಡೆ ನಿರ್ಮಾಣಕ್ಕೆ 500 ಲಕ್ಷ ರೂ. ಬಿಡುಗಡೆಯಾಗಿದೆ. ಒಟ್ಟಾರೆ ಕಂದಾಯ ಇಲಾಖೆ ವ್ಯಾಪ್ತಿಗೆ 1600 ಲಕ್ಷ ರೂ. ಬಿಡುಗಡೆಯಾಗಿದೆ. ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮಡಿಕೇರಿ ನಗರದ ಟೌನ್‍ಹಾಲ್ ಕಟ್ಟಡ ನಿರ್ಮಾಣಕ್ಕೆ 494 ಲಕ್ಷ ರೂ. ಬಿಡುಗಡೆಯಾಗಿದೆ. ಒಟ್ಟಾರೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 10 ಸಾವಿರ ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಶಾಸಕÀ ಕೆ.ಜಿ.ಬೋಪಯ್ಯ ಮಾಹಿತಿ ನೀಡಿದ್ದಾರೆ.