ಶನಿವಾರಸಂತೆ, ಜು. 25: ಕನ್ನಡಮ್ಮನ ಜಾತ್ರೆಗೆ ಸಮೀಪದ ಆಲೂರು ಸಿದ್ದಾಪುರ ಗ್ರಾಮ ಸಜ್ಜಾಗುತ್ತಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ತುಂತುರು ಮಳೆ ಸಿಂಚನದ ನಡುವೆ ಭರದ ಸಿದ್ಧತೆ ನಡೆದಿದೆ.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾ. 26 ರಂದು (ಇಂದು) ಬೆಳಿಗ್ಗೆ ವಸತಿ ಶಾಲೆಯ ಜಂಗಮರ ಶರಣೆ ಲಿಂಗೈಕ್ಯ ಶಾಂತಮ್ಮ ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ. ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದು, ಸಿ.ಕೆ. ಶಿವರಾಂ ಸಭಾಂಗಣ, ವಿವಿಧ ದ್ವಾರಗಳ, ವೇದಿಕೆಗಳ ಹಾಗೂ ಗ್ರಾಮದ ಅಲಂಕಾರದ ವ್ಯವಸ್ಥೆಯಲ್ಲಿ ತೊಡಗಿದ್ದರು. ವಸತಿ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳೂ ಸಹಕಾರ ನೀಡುತ್ತಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, 8.15ಕ್ಕೆ ದ್ವಾರಗಳ ಉದ್ಘಾಟನೆ ನಡೆಯಲಿದೆ. ಮಾಲಂಬಿ ರಸ್ತೆ, ಪೆಟ್ರೋಲ್ ಬಂಕ್ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 11.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿಜೇತ್ ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಕಸಪಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಆಶಯ ನುಡಿ, ಸಮ್ಮೇಳನಾಧ್ಯಕ್ಷೆ ಜಲಾಕಾಳಪ್ಪ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ಬಿ.ಎ. ಜೀವಿಜಯ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಹಿರಿಯ ಸಾಹಿತಿ ಡಾ. ಪ್ರಭಾಕರ್ ಶಿಶಿಲ ಪಾಲ್ಗೊಳ್ಳುತ್ತಾರೆ.