ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಗಳೆಂದರೆ ಜನರಿಗೆ ಒಂದಷ್ಟು ಮನೋರಂಜನೆ, ಒಂದಷ್ಟು ಕೋಪ, ಒಂದಷ್ಟು ಹತಾಶೆ, ಒಂದಷ್ಟು ಪಶ್ಚಾತಾಪ.

ಸಭೆಯ ನಡಾವಳಿಕೆಗಳನ್ನು ಮಾಧ್ಯಮಗಳಲ್ಲಿ ಓದಿದವರು ಮತ್ತು ವೀಕ್ಷಿಸಿದವರು, ಹಿರಿಯರೆಲ್ಲ ಗೌರವದಿಂದ ಕಂಡು-ಬಿಟ್ಟುಕೊಟ್ಟ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಸಂಸ್ಥೆಯೇ ಇದು? ಎಂದು ಪ್ರಶ್ನಿಸಿಕೊಳ್ಳುತ್ತಾರೆ.ಸದಾ ಕೆಸರೆರೆಚಾಟ, ಪರಸ್ಪರ ಆರೋಪ ಪ್ರತ್ಯಾರೋಪ, ಸಮಾಜ ಗಮನಿಸುತ್ತಿದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ಏಕವಚನ ಹಾಗೂ ನಿಂದನೆಯ ಮಾತುಗಳು, ಮಹಿಳೆಯರಿಗೆ ಸಿಗಬೇಕಾದ ಗೌರವಕ್ಕೂ ಇಲ್ಲದ ಬೆಲೆ, ಮಡಿಕೇರಿ ಅನುಭವಿಸುತ್ತಿರುವ ನೂರಾರು ಸಮಸ್ಯೆಗಳ ಚರ್ಚೆ ಬದಲು ಪ್ರತಿಷ್ಠೆಯ ಉಳಿವಿಗಾಗಿ ಸಭೆಯ ಬಳಕೆ, ಅನಾವಶ್ಯಕ ಸಮಯ ವ್ಯರ್ಥ, ನಿರ್ಣಯಕ್ಕೆ ಬಾರದ ಗಂಭೀರ ವಿಚಾರಗಳು, ಇತ್ತೀಚಿನ ವರ್ಷಗಳ ಬೆಳವಣಿಗೆಗಳು.ನಗರದಲ್ಲಿ ಮಳೆಯಿಂದ ಸಾಕಷ್ಟು ನಷ್ಟವಾಗಿದೆ. ರಸ್ತೆಗಳು ಕಿತ್ತು ಬಂದಿವೆ, ಚರಂಡಿಯಲ್ಲಿ ಹರಿಯಬೇಕಾದ ನೀರೆಲ್ಲಾ ರಸ್ತೆಯನ್ನು ಆವರಿಸಿದೆ. ಹಲವು ಮನೆಗಳು ಹಾನಿಯಾಗಿವೆ. ವಿದ್ಯುತ್ ಸಮಸ್ಯೆಯಿಂದ ಜನ ಬಳಲಿದ್ದಾರೆ. ಬೆಟ್ಟ ಗುಡ್ಡಗಳು ಕುಸಿದಿವೆ. ಹೊಸ ಖಾಸಗಿ ಬಸ್ ನಿಲ್ದಾಣ ಬೇಕೇ ಬೇಡವೇ ಎಂಬ ಚರ್ಚೆ ನಗರಸಭಾ ಸದಸ್ಯರ ನಡುವೆಯೇ ನಡೆಯುತ್ತಿದೆ. ಕಲಾಮಂದಿರವಿಲ್ಲದೆ ಕಾವೇರಿ ಕಲಾಕ್ಷೇತ್ರ ಗಬ್ಬೆದ್ದಿದೆ. ಪಾರ್ಕಿಂಗ್ ವ್ಯವಸ್ಥೆ ಸರಿ ಇಲ್ಲದೆ ವಾಹನವುಳ್ಳವರು ಪರದಾಡುತ್ತಿದ್ದಾರೆ. ನಗರದಲ್ಲಿ ಕಳ್ಳಕಾಕರ ಭೀತಿ ಹೆಚ್ಚಿದೆ. ಬೀಡಾಡಿ ದನಗಳು ಊರೆಲ್ಲಾ ತುಂಬಿವೆ. ನಗರಸಭೆಯಲ್ಲಿ ಶ್ರೀಸಾಮಾನ್ಯನ ಕೆಲಸ ತೀರಾ ವಿಳಂಬವಾಗುತ್ತಿದೆ. ಭೂಪರಿವರ್ತನೆ ಆದೇಶ, ಫಾರಂ 3ರ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ನಗರಸಭೆ ವ್ಯಾಪ್ತಿಯ ಶಾಲೆಗಳು ನರಕಕ್ಕಿಂತಲೂ ಮಿಗಿಲಾದ ಸಮಸ್ಯೆಗಳಿಂದ ತುಂಬಿವೆ. ಮಾರುಕಟ್ಟೆ ವ್ಯಾಪಾರಿಗಳಿಗೆ ಕನಸಿನ ಮಾತಾಗಿದೆ. ರಾಜಾಸೀಟು ವ್ಯವಸ್ಥೆಗಳಿಂದ ವಂಚಿತವಾಗಿದೆ. ಎಲ್ಲರೂ ಪ್ರೀತಿಸುವ ನೆಹರೂ ಮಂಟಪ, ಆ ವ್ಯಕ್ತಿಯನ್ನೇ ಅಪಮಾನಿಸುವಂತಿದೆ. ತಾತ್ಕಾಲಿಕ ಶೆಡ್‍ಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಗರಸಭೆಗೆ ವಾರ್ಷಿಕ ತೆರಿಗೆ ಪಾವತಿಸದೆ ನಷ್ಟವಾಗುತ್ತಿದೆ. ಕಾರ್ಮಿಕರ ಕೊರತೆಯಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ.

ಇಂತಹ ಬೆಟ್ಟದಷ್ಟು ಸಮಸ್ಯೆಗಳಿರುವ ನಗರದಲ್ಲಿ, ನಮ್ಮ ಜನಪ್ರತಿನಿಧಿಗಳು ಸಾಮಾನ್ಯ ಸಭೆಯಲ್ಲಿ ವರ್ತಿಸುವ ರೀತಿ ಬದಲಾಗಬೇಕಿದೆ. ಜನರ ಹಿತಕೋಸ್ಕರ ಮುಂದಿಡುವ ಪ್ರಶ್ನೆಗಳು ಸೌಜನ್ಯದ ಮಾತುಗಳೊಂದಿಗೆ ಹೊರ ಬರಬೇಕಿದೆ. ಮೌನವಾಗಿರುವವರು ಮಾತಾಡುವ ಅವಕಾಶ ವಂಚಿತರಾಗಿ ಬೊಬ್ಬಿಡುವವರದೇ ಮೇಲುಗೈಯಾಗಿ ಕಂಡುಬರುತ್ತಿರುವ ಸಭೆ ಎಲ್ಲ ಸದಸ್ಯರಿಗೂ ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಿಕೊಡಬೇಕಿದೆ. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಇತರರಾಗಲಿ ಸಭೆಗೆ ಬರುವ ಮೊದಲು ವಿಷಯಗಳ ಅಧ್ಯಯನ, ವಿಷಯ ಮಂಡನೆಯ ರೀತಿ ಮತ್ತು ನೀತಿ, ಮುಂದಿಡುವ ವಿಷಯವನ್ನು ಎಲ್ಲರೂ ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುವಂತೆ ಮಂಡಿಸುವ ಜಾಣ್ಮೆ, ಒಂದು ವಿಷಯದ ಕುರಿತು ಕೈಗೊಳ್ಳುವ ನಿರ್ಣಯಕ್ಕೆ ಎಲ್ಲರ ಬೆಂಬಲ ಪಡೆಯುವ ವಿಶ್ವಾಸಾರ್ಹತೆ ಹೊಂದಿರುವದು ಅಗತ್ಯವಾಗಿದೆ.

ಇಲ್ಲವಾದಲ್ಲಿ ಮೊದಲೇ ಹೇಳಿದಂತೆ ಮಡಿಕೇರಿ ನಗರಸಭೆಯ ಸಭಾಂಗಣ ಕೇವಲ ಕಚ್ಚಾಟದ ಗೂಡಾಗಿ, ಅಬ್ಬರದ ಧ್ವನಿಗಳಿಗೆ ವೇದಿಕೆಯಾಗಿ, ಸಮಯ ವ್ಯರ್ಥ ಮಾಡುವ ಕೊಠಡಿಯಾಗಿ, ಸದಸ್ಯರುಗಳ ಅವಶ್ಯಕತೆಯನ್ನು ಪ್ರಶ್ನಿಸುವ ಕೋಣೆಯಾಗಿ, ಸದಸ್ಯರುಗಳಿಗೂ ನಿಷ್ಪ್ರಯೋಜಕವಾಗುವ ಆವರಣವಾಗಿ, ಮಡಿಕೇರಿ ಜನತೆಗೆ ಅದೊಂದು ಭಯಾನಕ ಕಟ್ಟಡವಾಗಿ ಗೋಚರಿಸುತ್ತದೆ.

ಇಂದಿನ ಸಭೆ ಇವೆಲ್ಲವದಕ್ಕೆ ಹೊರತಾಗಿರಲಿ.