ಹೌದು, ದೇಶದ ಗಡಿಭದ್ರತಾ ಪಡೆಯ ವೀರ ಯೋಧನೊಬ್ಬ ಗ್ರಹಚಾರ ಕೆಟ್ಟು ಬೇರೆ ಹೆಣ್ಣೊಬ್ಬಳ ಸಂಪರ್ಕ ಸಾಧಿಸಿದ ಪರಿಣಾಮ, ತನ್ನ ಮಡದಿ ಹಾಗೂ ಪುಟ್ಟ ಮಗುವಿಗೆ ಹೆಚ್‍ಐವಿ ಸೋಂಕು ತಗಲುವಂತಾಗಿ, ಆ ಸಂಸಾರ ಸಂಕಟದಲ್ಲಿ ಸಿಲುಕಿಕೊಳ್ಳಲಿದೆ; ಸದಾ ಸೇನೆಯಲ್ಲಿ ಗಡಿಭದ್ರತಾ ತಂಡದೊಂದಿಗೆ ಮುಂಚೂಣಿ ನಿಂತು ಶತ್ರು ಪಡೆಯ ಹೆಡೆಮುರಿ ಕಟ್ಟಿ ವೀರ ಕಲಿಯಾಗಿ ಕೆಚ್ಚೆದೆಯ ಹೋರಾಟ ನಡೆಸುತ್ತಿದ್ದ ಆತ; ಏಡ್ಸ್ ಸೋಂಕಿನಿಂದ ಖಿನ್ನನಾಗಿ ಬಿಡುತ್ತಾನೆ. ಇನ್ನೊಂದೆಡೆ ಆತನ ಮಗುವಿಗೆ ಚಿಕಿತ್ಸೆ ಲಭಿಸದೆ ಅಸುನೀಗುತ್ತದೆ.

ಇತ್ತ ತನ್ನ ಪರಿಚಿತ ಯೋಧರೆಲ್ಲರೂ ದಿನೇ ದಿನೇ ಈತನಿಂದ ದೂರವಾಗುತ್ತಾ, ಒಡನಾಟಕ್ಕೆ ಸಿಲುಕದೆ ಅಪರಿಚಿತರಾಗಿ ಬಿಡುತ್ತಾರೆ. ಗಡಿ ಭದ್ರತಾ ಪಡೆಗೆ ಮಂಜು, ಹಿಮದೊಂದಿಗೆ ಚಳಿಯಲ್ಲಿ ಬಳಲುತ್ತಿದ್ದಾಗ ಬಾಯಿಗೆ ಬೆಚ್ಚನೆಯ ತಾಂಬೂಲ ನೀಡುತ್ತಿದ್ದ ಬೀಡಾ ಅಂಗಡಿ ಮಾಲೀಕನಿಗೂ ಇಂತಹ ಸೋಂಕು ತಗಲಿಬಿಡುತ್ತದೆ. ಆತ ಜನರ ತಿರಸ್ಕಾರ ಬಾವದಿಂದ ನೊಂದು ಊರು ಬಿಡುತ್ತಾನೆ.

ಹೆಚ್‍ಐವಿ ಸೋಂಕಿಗೆ ಕಾರಣ ಹುಡುಕುತ್ತಾ ಹೊರಟಾಗ ವೈದ್ಯನೊಬ್ಬ ಏಡ್ಸ್ ರೋಗಿಗೆ ನೀಡಿದ್ದ ಚುಚ್ಚುಮದ್ದಿನ ಸೂಜಿಯನ್ನೇ ಈತನಿಗೂ ಬಳಕೆ ಮಾಡಿದ ಪರಿಣಾಮವೆಂಬದು ಅರಿವಿಗೆ ಬರಲಿದೆ. ಆದರೂ ಕಂಗೆಟ್ಟ ಜೀವಗಳೆರಡು ತಮ್ಮವರಿಗಾಗಿ, ತಮ್ಮನ್ನು ಆಶ್ರಯಿಸಿರುವ ಮಡದಿಗಾಗಿ ಬದುಕಲು ಹಂಬಲಿಸುತ್ತಾರೆ.

ಯೋಧ ಹಾಗೂ ಬೀಡದಂಗಡಿ ಮಾಲೀಕ ಸಂಕಷ್ಟಕ್ಕೆ ಸಿಲುಕಿದ ವಿಚಾರ ಮತ್ತು ಅಪಾಯ ಎದುರಾಗಲು ಕಾರಣವನ್ನು ಹಿರಿಯ ಸೈನ್ಯಾಧಿಕಾರಿ ತಿಳಿದುಕೊಳ್ಳುತ್ತಾರೆ. ಹೆಚ್‍ಐವಿ ಸೋಂಕಿಗೆ ಸಿಲುಕಿದ ಸೈನಿಕ ಹಾಗೂ ಬೀಡದಂಗಡಿಯಾತನಿಗೆ ಆತ್ಮವಿಶ್ವಾಸ ತುಂಬಿ ರಕ್ತ ಪರೀಕ್ಷೆಯೊಂದಿಗೆ ಸಕಾಲದಲ್ಲಿ ಚಿಕಿತ್ಸೆಗೆ ಪ್ರೋತ್ಸಾಹಿಸುತ್ತಾರೆ.

ಮೇಲಧಿಕಾರಿ ಹಾಗೂ ಗಡಿಭದ್ರತಾ ಪಡೆ ಆಸ್ಪತ್ರೆ ವೈದ್ಯರ ಪ್ರೋತ್ಸಾಹದಿಂದ ಇಬ್ಬರು ಸಂಕಟದಿಂದ ಪಾರಾಗುತ್ತಾರೆ. ಮಾತ್ರವಲ್ಲದೆ ಎಳೆಯ ಪ್ರಾಯದ ಯೋಧ ಮತ್ತೆ ತನ್ನ ಪತ್ನಿಯೊಂದಿಗೆ ನೆಮ್ಮದಿಯ ಬದುಕಿನೊಂದಿಗೆ ಆಕೆ ಮತ್ತೊಂದು ಮಗುವಿಗೆ ತಾಯಿಯಾಗುತ್ತಾಳೆ. ಸಕಾಲಿಕ ಚಿಕಿತ್ಸೆ ಫಲವಾಗಿ ಹುಟ್ಟುವ ಮಗು ನಿರೋಗಿಯಾಗಿರುತ್ತದೆ.

ದೇಶ ಕಾಯುವ ಯೋಧನೊಬ್ಬ ಸಂಸಾರದ ತೊಳಲಾಟದಿಂದ ಪಾರಾಗಿ ಮತ್ತೆ ತನ್ನ ಸಂಗಡಿಗರೊಂದಿಗೆ ಸೈನ್ಯಾಧಿಕಾರಿಯ ಭುಜಕ್ಕೆ ಭುಜ ಕೊಟ್ಟು ದೇಶ ರಕ್ಷಣೆಯ ಕಾಯಕನಿರತನಾಗುತ್ತಾನೆ. ತನ್ನ ಮಗನಿಗೂ ಗಡಿ ಭದ್ರತಾ ಪಡೆ ಸೇರುವಂತೆ ಪ್ರೋತ್ಸಾಹಿಸುತ್ತಾನೆ. ಈ ರೋಚಕ ಕತೆಯನ್ನು ಸಾಕ್ಷ್ಯ ಚಿತ್ರ ಸಹಿತ ಪ್ರದರ್ಶಿಸುತ್ತಾ, ‘ಸಾವಧಾನ... ನಾವು ದೇಶದ ಗಡಿ ರಕ್ಷಕರು... ಕೆಚ್ಚ್ಚದೆ ಉಳ್ಳವರು... ಕಲ್ಲು ಮುಳ್ಳು ಹಾದಿಯಲಿ... ದೇಶಸೇವೆ ಗೈವೆವು’ ಇತ್ಯಾದಿ ಹಿನ್ನೆಲೆ ಗಾಯನದೊಂದಿಗೆ ಎದೆ ಝಲ್ಲೆನಿಸುವಂತೆ ಆಯಿತು. ಇಂದು ಪೊಲೀಸ್ ಇಲಾಖೆಗೆ ಇಲ್ಲಿನ ಕೂರ್ಗ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಏಡ್ಸ್ ನಿಯಂತ್ರಣ ಅರಿವು ಕಾರ್ಯಾಗಾರದಲ್ಲಿ ಮೂಡಿಬಂದ ಸಾಕ್ಷ್ಯಚಿತ್ರಕತೆ ಇದಾಗಿತ್ತು.

-ಶ್ರೀಸುತ