*ಸಿದ್ದಾಪುರ, ಜು. 25: ಮೇಯಲೆಂದು ಕಟ್ಟಿಹಾಕಿದ್ದ ಹಾಲು ಕರೆಯುವ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿ ಗಾಯಗೊಳಿಸಿರುವ ಘಟನೆ ಸಂಭವಿಸಿದೆ.
ನೆಲ್ಯಹುದಿಕೇರಿಯ ರೈತ, ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಮುಟ್ಲುಮನೆ ಮುತ್ತಪ್ಪ ಅವರು ಎಂದಿನಂತೆ ಇಂದು ಕೂಡ ತಮ್ಮ ಹಾಲು ಕರೆಯುವ ಹಸುವಿನ ಹಾಲು ಕರೆದು ಮೇಯಲೆಂದು ತೋಟದ ಬದಿಯಲ್ಲಿ ಕಟ್ಟಿ ಹಾಕಿದ್ದರು. ಹಸು ಮೇಯುತ್ತಿದ್ದ ಸ್ಥಳಕ್ಕೆ ಬೆಳಿಗ್ಗೆಯೇ ಧಾಳಿ ಮಾಡಿದ ಕಾಡಾನೆ ತನ್ನ ಕೊರೆಯಿಂದ ಹಸುವಿಗೆ ತಿವಿದಿದೆ. ಹಸುವಿನ ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಸ್ಥಳಕ್ಕೆ ಚೆಟ್ಟಳ್ಳಿ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯ ಡಾ. ಹೇಮಂತ್‍ಕುಮಾರ್ ಶಿಂಧೆ, ಲಿಂಗರಾಜು, ನೀರುಕೊಲ್ಲಿ ಅರಣ್ಯ ವನಪಾಲಕ ವಿಕಾಸ್ ಭೇಟಿ ನೀಡಿ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಇಂದು ಹಾಡಹಗಲೇ ಚೆಟ್ಟಳ್ಳಿಯ ನೆಲ್ಲಿಹಡ್ಲು, ಕಂಡಕೆರೆ ರಸ್ತೆಯಲ್ಲಿ ಆನೆಗಳು ಮುಖ್ಯ ರಸ್ತೆಯಲ್ಲೇ ಸಾಗಿ ಭಯ-ಭೀತಿ ಮೂಡಿಸಿವೆ.