ಮಡಿಕೇರಿ, ಜು. 26: ಮಡಿಕೇರಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣದ ಹೆಸರಿನಲ್ಲಿ ತೀರಾ ಅವೈಜ್ಞಾನಿಕವಾಗಿ, ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಸಿದ್ದು, ಸದಸ್ಯರ ಆಕ್ಷೇಪಣೆ ನಡುವೆಯೂ ಸಂಪೂರ್ಣ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಇಂದಿನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಹಾಗೂ ಆಯುಕ್ತರು ತರಾತುರಿಯಲ್ಲಿ ಗುತ್ತಿಗೆದಾರರಿಗೆ ಸಂಪೂರ್ಣ ಮೊತ್ತ ಪಾವತಿಸಿರುವದರ ಹಿಂದೆ ಸಾಕಷ್ಟು ಸಂಶಯ ಮೂಡುವಂತಾಗಿದೆ ಎಂದು ಮಾಜೀ ಅಧ್ಯಕ್ಷರೂ ಆಗಿರುವ ಸದಸ್ಯ ಪಿ.ಡಿ. ಪೊನ್ನಪ್ಪ ಆರೋಪಿಸಿದರು.

ಈ ಬಗ್ಗೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣ, ಸದಸ್ಯರುಗಳಾದ ಕೆ.ಎಸ್. ರಮೇಶ್, ಅಮೀನ್ ಮೊಯ್ಸಿನ್, ಮನ್ಸೂರ್, ಅನಿತಾ ಪೂವಯ್ಯ ಸೇರಿದಂತೆ ಇತರರು ಅಸಮಾಧಾನ ಹೊರಹಾಕಿದರು. ಸದಸ್ಯೆ ವೀಣಾಕ್ಷಿ ತೀವ್ರ ಆಕ್ರೋಶಗೊಂಡು ಸಂಬಂಧಿಸಿದ ಗುತ್ತಿಗೆದಾರರನ್ನು ಸಭೆಗೆ ಕರೆಸಿ ಯಾರ್ಯಾರಿಗೆ ಲಂಚ ಕೊಟ್ಟಿದ್ದಾರೆ ಬಹಿರಂಗವಾಗಿ ಹೇಳಬೇಕೆಂದು ಪಟ್ಟು ಹಿಡಿದರು. ಚುಮ್ಮಿ ದೇವಯ್ಯ, ಮತ್ತಿತರರು ಧನಿಗೂಡಿಸಿ ನಗರಸಭಾ ಸದಸ್ಯರು ಈ ವಿಚಾರದಲ್ಲಿ ಮುಜುಗರ ಪಡುವಂತಾಗಿದೆ ಎಂದರೆ, ರಸ್ತೆಯಲ್ಲಿ ತಲೆ ಎತ್ತಿಕೊಂಡು ಓಡಾಡಲು ನಾಚಿಕೆಯಾಗುತ್ತದೆ ಎಂದು ಅಮೀನ್ ಜರಿದರು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನಿಯಮಾನುಸಾರ ಹಣ ಪಾವತಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಆಯುಕ್ತೆ ಶುಭ ಅಧ್ಯಕ್ಷರ ಸಲಹೆ ಮೇರೆಗೆ ಹಣ ಪಾವತಿಸಿದ್ದಾಗಿ ಹೇಳಿದರೆ, ಸಹಾಯಕ ಇಂಜಿನಿಯರ್ ವನಿತ ಕಾಮಗಾರಿ ಪೂರೈಸಿರುವ ಮೇರೆಗೆ ಹಣ ಪಾವತಿಗೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಸದಸ್ಯರುಗಳ ಆಕ್ಷೇಪಣೆ ಯಿದ್ದರೂ ಯಾರೋ ಒಬ್ಬರ ಒತ್ತಡದಿಂದ ಅಧ್ಯಕ್ಷರು ಯಾರ ಅರಿವಿಗೂ ಬಾರದಂತೆ ಗುತ್ತಿಗೆದಾರನಿಗೆ ಹಣ ನೀಡಿರುವ ದಾಗಿ ಸದಸ್ಯರು ಹೌಹಾರಿದರು. ಹೈಟೆಕ್ ನಿಲ್ದಾಣ ಹೆಸರಿನಲ್ಲಿ ತಗಡುಗಳನ್ನು ಹೊದಿಸಿ ಬಿಸಿಲು ಹಾಗೂ ಮಳೆ ಎರಡನ್ನೂ ಪ್ರಯಾಣಿಕರು ತಡೆದುಕೊಳ್ಳದ ಸ್ಥಿತಿ ಕಾಮಗಾರಿ ಮಾಡಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು. ಒಂದೇ ಬಾಗಿಲು ಮೂಲಕ ಪುರುಷರು- ಮಹಿಳೆಯರಿಗೆ ಶೌಚಾಲಯ ನಿರ್ಮಿಸಿ ರುವದು ಎಷ್ಟು ಸಮಂಜಸವೆಂದು ಪ್ರಶ್ನಿಸಿದರು. ಈ ಬಗ್ಗೆ ಗಂಭೀರ ಚರ್ಚೆ ನಡೆದು, ಗುತ್ತಿಗೆದಾರ 2 ವರ್ಷ ಬಸ್ ನಿಲ್ದಾಣ ನಿರ್ವಹಣೆ ಮಾಡುವಂತೆ ಮತ್ತು ಇ.ಎಂ.ಡಿ. ಹಣ ತಡೆಹಿಡಿ ಯಲು ನಿರ್ಣಯಿಸಲಾಯಿತು.

ಉನ್ನಿಕೃಷ್ಣ ಸವಾಲ್: ಅಧ್ಯಕ್ಷರು ಕಾಮಗಾರಿಗೆ ಸಹಕರಿಸಿ ನಿಯಮಾನುಸಾರ ಕೆಲಸ ಕಾರ್ಯಕ್ಕೆ ಸಹಕರಿಸಿದರೆ 15 ದಿನಗಳಲ್ಲಿ ಮಹದೇವಪೇಟೆ ರಸ್ತೆ ಕಾಮಗಾರಿ ಆರಂಭಿಸುವದಾಗಿ ನುಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ, ಅದು ಸಾಧ್ಯವಾಗದಿದ್ದರೆ ಸ್ಥಾನ ತ್ಯಜಿಸುವೆ... ಒಪ್ಪುವಿರಾ ಎಂದು ಸವಾಲು ಹಾಕಿದರು. ಆ ಬಗ್ಗೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರತಿಕ್ರಿಯಿಸಲಿಲ್ಲ; ಬದಲಾಗಿ ಸ್ಥಾಯಿ ಸಮಿತಿ ಸಭೆಗೆ ತನ್ನ ಉಪಸ್ಥಿತಿಯ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.

ಇರುವ ಆರು ತಿಂಗಳ ಅವಧಿಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ದಾದರೆ ಸಾಮೂಹಿಕ ರಾಜೀನಾಮೆ ನೀಡೋಣವೆಂದು ಕೆ.ಎಸ್. ರಮೇಶ್ ಮಾತಿನ ಚಾಟಿ ಬೀಸಿದರು.