‘ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |

ತತ್ವದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ||

ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ತ್ವವು ಯಾರಿಂದ ತೋರಿಸಲ್ಪಟ್ಟಿತೋ ಅಂತಹ ಶ್ರೀ ಗುರುವಿಗೆ ನಮಸ್ಕಾರ.

ಶ್ರುತಿ, ಸ್ಮøತಿ, ಪುರಾಣ ಈ ಮೂರಕ್ಕೂ ಪರಮಾಚಾರ್ಯರು ಎಂದೆ ಪರಿಗಣಿತರಾದವರು ಮಹರ್ಷಿ ವೇದವ್ಯಾಸರು. ಇವರು ಭಾರತೀಯ ಪರಂಪರೆಯಲ್ಲಿ ಪರಮೋನ್ನತ ಗುರು. ಇವರ ಜನ್ಮ ದಿವಸವನ್ನು ನಿಮಿತ್ತವಾಗಿಸಿ ಸಕಲ ಗುರು ಪರಂಪರೆಯನ್ನು ಗೌರವಿಸಲು ಜಗತ್ತಿನಾದ್ಯಂತ ಭಾರತೀಯ ಪರಂಪರೆಗಳಿರುವೆಡೆ ಆಷಾಡ ಮಾಸದ ಹುಣ್ಣಿಮೆಯನ್ನು ಗುರುವಿನ ಹುಣ್ಣಿಮೆ ಅಥವಾ ಗುರುಪೂರ್ಣಿಮೆಯನ್ನಾಗಿ ಆಚರಿಸಲಾಗುವದು. ಈ ವಿಶಿಷ್ಟವಾದ ದಿನ ಮಹರ್ಷಿ ವೇದವ್ಯಾಸರ ಜನ್ಮದಿನ. ಆದ್ದರಿಂದ ಪ್ರಧಾನವಾಗಿ ಈ ದಿವಸವನ್ನು ‘ವ್ಯಾಸ ಪೂರ್ಣಿಮೆ’ಯೆಂದೂ ಹೇಳಲಾಗುವದು. ಈ ವಿಶೇಷ ದಿವಸವನ್ನು ಬ್ರಹ್ಮ ಸೂತ್ರಗಳ ರಚನೆಯ ಆರಂಭದ ದಿವಸವೆಂದೂ ಹೇಳಲಾಗುವದು. ಬ್ರಹ್ಮ ವಿದ್ಯೆಯನ್ನು ಉಪದೇಶಿಸಿದ ಗುರು ಪರಂಪರೆಗೆ ಪೂಜೆ ಸಲ್ಲಿಸಲು ಇದು ಯೋಗ್ಯ ದಿವಸ. ಗುರುವು ಸೃಷ್ಟಿ, ಸ್ಥಿತಿ, ವಿನಾಶಗಳನ್ನು ಮಾಡುವವನಷ್ಟೇ ಅಲ್ಲ. ಅವನು ದೇಶ, ಕಾಲ, ಕಾರ್ಯ ಕಾರಣಗಳನ್ನು ಮೀರಿದ ಪರಬ್ರಹ್ಮನೇ ಆಗಿದ್ದಾನೆಂದು ಶಾಸ್ತ್ರಗಳು ಹೇಳುತ್ತವೆ. ‘ಪರಬ್ರಹ್ಮ’ ವಸ್ತು ತನ್ನ ನೈಜ ಸ್ವರೂಪದಲ್ಲಿ ನಿರ್ಗುಣ - ನಿರಾಕಾರ ಹಾಗೂ ಅವ್ಯಕ್ತವಾದದ್ದು. ಅದನ್ನು ಇಂದ್ರಿಯ, ಮನಸ್ಸು, ಬುದ್ಧಿಗಳು ಗ್ರಹಿಸಲಾರವು. ಮಾತು ವಿವರಿಸಲಾರದು ಹೀಗೆನ್ನುತ್ತದೆ ವೇದಾಂತ. ‘ಯಾವ ತತ್ವವು ತಾನಾಗಿಯೇ ಒಬ್ಬನಿಗೆ ತನ್ನ ಸತ್ಯವನ್ನು ತಿಳಿಸಿಕೊಡುವದೋ ಅದು ಅಂಥವನಿಗೆ ಮಾತ್ರ ಲಭ್ಯವಾಗುವದು’. ಇದರರ್ಥ ಸ್ವತಃ ಪರಮಾತ್ಮನೇ ತನ್ನ ಸತ್ಯವನ್ನು ತಿಳಿಸಿಕೊಟ್ಟಲ್ಲದೆ ಭಗವಂತನ ಸ್ವರೂಪವು ಮನುಷ್ಯನಿಗೆ ತಿಳಿಯಲಾಗದು. ಹಲವು ಪೌರಾಣಿಕ, ವೈದಿಕ ಕಥೆಗಳಲ್ಲಿ ಕಂಡುಬರುವ ಮಹಾಪುರುಷರು ಭಗವಂತನ ಅವಿರ್ಭಾವವೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಅಂಥವರನ್ನು ಯೋಗಿ, ಋಷಿ, ಅವತಾರ ಎಂದೆಲ್ಲಾ ಹೇಳಲಾಗಿದೆ. ಇವರ ಉದ್ದೇಶ ಭಗವಂತನ ತತ್ತ್ವವನ್ನು ಜೀವರುಗಳಿಗೆ ತಿಳಿಸಿಕೊಡುವದು. ಇವರನ್ನೇ ಗುರುವೆಂದು ಸಂಬೋಧಿಸಲಾಗಿದೆ. ‘ಗುರು’ ಎಂದರೆ ಎಲ್ಲದಕ್ಕೂ ಹಿರಿದು, ಶ್ರೇಷ್ಠ, ಮಾನ್ಯ, ಪೂಜಾರ್ಹ ಎಂದೂ ಅರ್ಥಗಳಿವೆ. ಅಜ್ಞಾನ, ಪಾಪಾದಿ ದೋಷಗಳ ನಿವಾರಕ ತತ್ವವೇ ಗುರು. ಮಾನವನು ಮುಕ್ತಿಯನ್ನು ಹೊಂದಲು ಅತ್ಯಂತ ಅಗತ್ಯವಾದ ಮೂರ್ತ ರೂಪವನ್ನು ತಳೆದು ಎಲ್ಲರಿಗೂ ಗೋಚರವಾಗುವಂತೆ ಅವನು ಅವಿರ್ಭವಿಸುತ್ತಾನೆ. ಏಕೆಂದರೆ ಭಗವಂತನೊಬ್ಬನೇ ಮಾನವನನ್ನು ಭಗವಂತನೆಡೆಗೆ ಕರೆದೊಯ್ಯಬಲ್ಲ. ಆದ್ದರಿಂದ ಗುರುವು ಭಗವಂತನೇ ಆಗಿದ್ದಾನೆ.

ಜಗವೇ ಒಂದು ಗುರು ಸ್ವರೂಪ. ಪ್ರತಿಯೊಬ್ಬರಲ್ಲೂ ಅಂತರ್ಯಾಮಿಯಾದ ಗುರುವೊಬ್ಬ ಇದ್ದೇ ಇರುತ್ತಾನೆ. ಆ ಅಂತರ್ಯಾಮಿ ಗುರು ಕಲಿಸುವ ಪಾಠ ವೈವಿಧ್ಯಮಯ! ವೈಚಿತ್ರ್ಯಪೂರ್ಣ!

‘ಬದುಕು’ ಎಲ್ಲವನ್ನು ಕಲಿಸುತ್ತದೆ ಎಂಬ ಮಾತಿದೆ. ಅಂದರೆ ಅದರಲ್ಲಿ ಉಂಟಾಗುವ ಏರಿಳಿತಗಳು, ಕಷ್ಟ-ನಷ್ಟಗಳು, ಸುಖ-ದುಃಖಗಳು ನಮಗೆ ಸಂತೋಷವನ್ನು ಕೊಡುವಂತೆಯೇ ಎಚ್ಚರಿಕೆಯ ಗಂಟೆಯನ್ನು ಭಾರಿಸುತ್ತವೆ. ಆದರೆ ನಾವು ಅದಕ್ಕೆ ಕಿವಿಗೊಡದೆ ಮುನ್ನುಗ್ಗುತ್ತೇವೆ. ನಮ್ಮ ಎದೆಯ ದನಿ ನಿಜವಾದ ಗುರು - ಮಾರ್ಗದರ್ಶಕ. ಪಠ್ಯ ಪುಸ್ತಕದಲ್ಲಿರುವದನ್ನು ಬೋಧಿಸಿ, ಅರ್ಥ ಹೇಳಿ, ವಿವರಣೆ ಕೊಡುವವನು ಎಂದಿಗೂ ನಿಜವಾದ ಗುರುವೆನಿಸಲಾರ. ಲೌಕಿಕ - ಅಲೌಕಿಕಗಳೆರಡನ್ನೂ ಅಂತರ್ಗತವಾಗಿಸಿಕೊಂಡು ಪ್ರತಿಯೊಬ್ಬರ ಒಳಿತಿಗೆ ಶ್ರಮಿಸುವ ಮನೋಭಾವದ ಆದರ್ಶತೆಯ ಗುರುವೇ ನಿಜವಾದ ಗುರುವೆನಿಸಲು ಸಾಧ್ಯ. ನಿಜವಾದ ಗುರು ತಪೋಬಲವುಳ್ಳವನಷ್ಟೇ ಅಲ್ಲ. ಸಾಕ್ಷಾತ್ಕಾರದ ಸವಿಯನ್ನು ಉಂಡವನು. ಅವನು ಯಾರನ್ನು ತನ್ನ ಶಿಷ್ಯನನ್ನಾಗಿ ಪ್ರೀತಿಯಿಂದ ಸ್ವೀಕರಿಸುತ್ತಾನೋ ಅವನಲ್ಲಿ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಮೆಲ್ಲ ಮೆಲ್ಲನೆ ಹರಿಯಲಾರಂಭಿಸುತ್ತಾನೆ. ಶಿಷ್ಯನು ಗುರುವಿನ ಪ್ರಕಾರ ಸಾಧನೆಯನ್ನು ಮಾಡುತ್ತ ಬಂದಂತೆ ಗುರುಶಕ್ತಿ ಪ್ರವಹಿಸುವದು ತೀವ್ರವಾಗುತ್ತದೆ. ಲೌಕಿಕ ವಿದ್ಯೆಯನ್ನು ನೋಡಿ - ಕೇಳಿ ಕಲಿಯಬಹುದು, ಸ್ವಪ್ರಯತ್ನದಿಂದಲೂ ಕಲಿಯಬಹುದು. ಆದರೆ ಆಧ್ಯಾತ್ಮಿಕ ವಿದ್ಯೆ ಹಾಗಲ್ಲ - ಪೂರ್ಣಜ್ಞಾನ ಪಡೆದ ಗುರುವಿನಿಂದ ಕಲಿತಲ್ಲದೆ ಅದನ್ನು ಪಡೆಯಲಾಗದು. ಆದ್ದರಿಂದ ಇಲ್ಲಿ ಕಲಿಸುವ ಗುರು ತುಂಬಾ ಮುಖ್ಯ ಆಧ್ಯಾತ್ಮಿಕ ಶಿಕ್ಷಣವು ವಿನಯ, ಅಹಂಕಾರ, ಶೂನ್ಯತೆ, ಸೇವಾ ಮನೋಭಾವ, ಆತ್ಮಸಮರ್ಪಣೆ ಈ ಗುಣಗಳನ್ನೆಲ್ಲಾ ಪೂರ್ವಭಾವಿ ಸಿದ್ಧತೆಯೆಂದೇ ಭಾವಿಸುತ್ತವೆ. ಭಾರತದಲ್ಲಿ ಎಲ್ಲಾ ವಿದ್ಯೆಗಳು ಆಧ್ಯಾತ್ಮ ವಿದ್ಯೆಯನ್ನು ಅನುಸರಿಸಿ ಬೆಳೆದುಬಂದವು. ಆದ್ದರಿಂದ ಅದೇ ಪ್ರಕಾರ ಆ ಎಲ್ಲಾ ಕ್ಷೇತ್ರಗಳಲ್ಲೂ ಗುರು ಪರಂಪರೆ ಬೆಳೆದು ಬಂದಿರುವದು ಅತ್ಯಂತ ಸಹಜವಾಗಿದೆ.

‘ಗುರು ಪೂರ್ಣಿಮೆ’ ಎಂಬದು ಬರಿಯ ಮಹರ್ಷಿ ವೇದವ್ಯಾಸರ ಜನ್ಮದಿನವಲ್ಲ. ಇದು ಪೂರ್ಣಿಮೆಯ ದಿನ. ಲೌಕಿಕ - ಆಧ್ಯಾತ್ಮಗಳ ಸುಂದರವಾದ ಮಂದ-ಮಧುರ ಶೀತಲವಾದ ಬೆಳಕನ್ನು ಕೊಡುವ ಸಂಕೇತವಾಗಿದೆ. ವ್ಯಕ್ತಿಯು ಅಮಾವಾಸ್ಯೆಯಿಂದ ಕ್ರಮವಾಗಿ ಪಾಡ್ಯ, ಬಿದಿಗೆ... ಹೀಗೆ ಸಾಗಿ ಪೂರ್ಣಿಮೆಯ ವಿದ್ಯಾಪೂರ್ಣತೆಗೆ ಸಾಗುವ ದಿನವಾಗಿದೆ ಎಂಬದರಿಂದ ಅದೇ ವ್ಯಾಸ - ಅಳತೆಯ ಪೂರ್ಣಿಮಾ ಸಿದ್ಧಿ ಎಂದರ್ಥ. ವ್ಯಾಸ ಮಹರ್ಷಿಗಳು ಚಿರಂಜೀವಿ. ಭಗವಾನ್ ಶ್ರೀಮನ್ನಾರಾಯಣರ ಅವತಾರ. ಶಿವಾನುಗ್ರಹದಿಂದ ಹುಟ್ಟಿದವರೆಂಬದೂ ಸಮನ್ವಯದ ವ್ಯಾಸವೇ. ‘ವ್ಯಾಸ’ ಎಂದರೆ ವಿಭಾಗಿಸು, ಅಳತೆ ಮಾಡುವ ಮತ್ತು ವ್ಯವಸ್ಥೆ ಪಡಿಸುವ ಎಂಬ ಅರ್ಥಗಳಿವೆ. ಜ್ಞಾನವನ್ನು ವಿತರಿಸುವ ತೀವ್ರಾಸಕ್ತಿಯಿಂದಲೂ ಇವರು ವ್ಯಾಸರು! ವೇದಗಳನ್ನು ವಿಭಾಗ ಮಾಡಿ ಋಗ್, ಯಜುರ್, ಸಾಮ, ಅಥರ್ವಣವೆಂದು ವಿಭಾಗಿಸಿ ಅವುಗಳಿಗೆ ಸಂಬಂಧಿಸಿದ ಅರಣ್ಯಕ, ಉಪನಿಷತ್ತುಗಳನ್ನು ವ್ಯವಸ್ಥೆಗೊಳಿಸಿ, ಶಿಕ್ಷಾ ಗ್ರಂಥಾದಿಗಳನ್ನು ನಿರ್ಮಿಸಿದವರು. ವೇದಾಂತ ದರ್ಶನದ ಆಧಾರ ಗ್ರಂಥಗಳಲ್ಲಿ ಒಂದಾದ ‘ಬ್ರಹ್ಮಸೂತ್ರ’ ಬಾದರಾಯಣ ಸೂತ್ರವನ್ನು ರಚಿಸಿದವರು. ಮಹಾಭಾರತದ ಕರ್ತೃ. ಯೋಗ ಶಾಸ್ತ್ರದ ಪ್ರಧಾನ ಭಾಷ್ಯವೂ ಇವರ ರಚನೆ. ಅಲ್ಲದೆ ಹದಿನೆಂಟು ಪುರಾಣಗಳು, ವ್ಯಾಸರ ರಚನೆಗಳೆಂದೆ ಪರಂಪರಾಗತ ವಿಶ್ವಾಸ. ಮಾನವ ಜೀವನಕ್ಕೆ ‘ಧರ್ಮ’ವೇ ಅಡಿಗಲ್ಲು. ಅದಕ್ಕಿಂತ ದೊಡ್ಡ ಬಂದು ಬೇರೆ ಯಾವದು ಇಲ್ಲ ಎಂಬದನ್ನು ಸಾರಿ ಸಾರಿ ಹೇಳಿದವರು ವ್ಯಾಸ ಮಹರ್ಷಿಗಳು. ಬದುಕಿನುದ್ದಕ್ಕೂ ಲೋಕ ಹಿತವನ್ನೇ ಬಯಸಿದವರು. ಅವರು ಜನತೆಯ ಶ್ರೇಯಸ್ಸು - ಪ್ರೇಯಸ್ಸುಗಳಿಗಾಗಿ ಜೀವನ ಧರ್ಮ, ಮಾನವನ ಧ್ಯೇಯ, ಲೋಕ ನೀತಿಗಳು ಹೇಗಿರಬೇಕೆಂಬದನ್ನು ಬೋಧಿಸಿದರು. ವ್ಯಾಸರು ಸಾಕ್ಷಾತ್ ಪರಶಿವನಿಂದಲೇ ‘ಸರ್ವರಿಗೂ ಗುರು’ ಎಂದು ಸನ್ಮಾನಿತರಾದವರು. ಇಂತಹ ಮಹಾನುಭಾವರ ಜನ್ಮದಿನ ‘ಗುರುಪೂರ್ಣಿಮೆ’. ಆ ಜಗತ್ ಗುರುವಿಗೆ ಭಕ್ತಿ, ಶ್ರದ್ಧೆಯಿಂದ ಕೃತಜ್ಞತೆ ಸಲ್ಲಿಸುವ ಶುಭದಿನ. ಈ ದಿವಸ ಸನ್ಯಾಸಿಗಳು, ಯತಿಗಳು, ಚಾತುರ್ಮಾಸ್ಯ ವೃತ ಸಂಕಲ್ಪ ಮಾಡುತ್ತಾರೆ. ಚಾತುರ್ಮಾಸ್ಯಕ್ಕೆ ಸಮನಾದ ವೃತ ಬೇರೆ ಯಾವದು ಇಲ್ಲ. ಇದು ಸಾಧಕರಿಗೆ, ಯೋಗಿ, ಸನ್ಯಾಸಿಗಳಿಗೆ ಆತ್ಮವಾಲೋಕನ, ಅಧ್ಯಯನ, ಪ್ರವಚನಗಳಿಗೆ ನೆಲೆ. ಒಂದೆಡೆ ಇದ್ದು ಇವುಗಳನ್ನು ಮಾಡುತ್ತಾ ಮುಂದಿನ ಕಾರ್ಯಕ್ಕಾಗಿ ಶಕ್ತಿ ಸಂಚಯನಕ್ಕೆ ಸಂಕಲ್ಪ ದಿನ. ಈ ದಿನದ ಆಚರಣೆ ಗುರುಗಳನ್ನು ಗೌರವಿಸುವದು, ಸಂಮಾನಿಸುವದು, ಕಾಣಿಕೆ ನೀಡುವದು, ಗುರುಗಳಿಂದ ವಿಶೇಷ ಮಾರ್ಗದರ್ಶನ ಪಡೆಯುವದು ಆಚರಣೆಯ ಭಾಗ.

ಅಧ್ಯಯನ, ಪ್ರವಚನ, ವ್ಯಾಸಾನು ಸಂಧಾನಗಳು ಮುಖ್ಯ. ಒಳ್ಳೆಯ ಗುರು ದೊರಕುವದು ಗುರುಯೋಗ. ನಿರ್ವಾಜ ಕರುಣೆಯೇ ಶ್ರೇಷ್ಠ ಗುರುವಿನ ಆದರ್ಶ. ಈ ಎಲ್ಲಾ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆಚರಿಸುವ ಗುರು ಪೂರ್ಣಿಮೆಯು ಎಲ್ಲಾ ಅರ್ಥಗಳಲ್ಲಿಯೂ, ಎಲ್ಲಾ ಹಂತಗಳಲ್ಲಿಯೂ ಗುರುವನ್ನು ಪೂಜಿಸುವ ಒಂದು ಪವಿತ್ರ ಕಾರ್ಯವೆನಿಸುವದು. ಈ ಪವಿತ್ರ ದಿನ ಗುರು ಶಕ್ತಿಯ ಕೃಪಾ ಪ್ರವಾಹ ನಮ್ಮೆಡೆಗೆ ಹರಿದು ಬರುವ ಸಂದರ್ಭವಾಗಲಿ ಎಂದು ಪ್ರಾರ್ಥಿಸೋಣ.

- ಮುಕ್ಕಾಟಿರ ದಿವ್ಯಾ ಕಾರ್ಯಪ್ಪ, ಪೊನ್ನಂಪೇಟೆ.