ಕುಶಾಲನಗರ, ಜು. 25: ಕುಶಾಲನಗರ ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕಂದಾಯ ಇಲಾಖೆಯ ನಾಡ ಕಚೇರಿಗೆ ಇಂದು ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ದಿಢೀರ್ ಭೇಟಿ ನೀಡುವದರೊಂದಿಗೆ ಆಸ್ಪತ್ರೆ ಮತ್ತು ನಾಡಕಚೇರಿಯ ಅವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶಗೊಂಡು, ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿ ಸಂಬಂಧಿಸಿದ ವೈದ್ಯರ ಸಹಿತ ಇತರ ಸಿಬ್ಬಂದಿಗಳು ಕೂಡ ನಾಪತ್ತೆಯಾಗಿದ್ದರು. ಒಂದಿಬ್ಬರು ದಾದಿಯರ ಹೊರತಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹೊರ ರೋಗಿಗಳು ಚಿಕಿತ್ಸೆಗಾಗಿ ಕಾದು ಕುಳಿತಿರುವದು ಗೋಚರಿಸಿತು. ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಳ ರೋಗಿಗಳಿಗೂ ಗಂಟೆ 1.30 ಕಳೆದಿದ್ದರೂ ಮಧ್ಯಾಹ್ನದ ಊಟವನ್ನು ಕೂಡ ನೀಡಿರಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಹೊರ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಕೂಡ ಒಳರೋಗಿಗಳ ಸಂಬಂಧಿಕರ ಸಹಿತ ಜಿಲ್ಲಾಧಿಕಾರಿಗಳ ಬಳಿ ದೂರುಗಳ ಸುರಿಮಳೆಯೊಂದಿಗೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಗಮನ ಸೆಳೆದರು.
ಹಾಜರಾತಿ ವಶ: ಆಸ್ಪತ್ರೆಯ ಹಾಜರಾತಿ ಪುಸ್ತಕವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದ ವೇಳೆ ಯಾರೊಬ್ಬರೂ ಸಹಿ ಮಾಡದಿರುವದು ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿತು. ಹಾಜರಾತಿಯನ್ನು ವಶಕ್ಕೆ ಪಡೆದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಿಂದ ಸೂಕ್ತ ಕ್ರಮಕ್ಕೆ ನಿರ್ದೇಶಿಸಿದರು.
ಆಸ್ಪತ್ರೆಯ ಶೌಚಾಲಯ ಇತ್ಯಾದಿ ಶುಚಿಗೊಳಿಸದೆ ದುರ್ನಾತ ಬೀರುತ್ತಿದೆ ಎಂದು ಒಳ ರೋಗಿಗಳು ದೂರಿಕೊಂಡ ಮೇರೆಗೆ, ಅತ್ತ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ ವಾಕರಿಕೆಯ ಸನ್ನಿವೇಶ ಕಂಡು ತೀವ್ರ ಅಸಮಾಧಾನ ಗೊಂಡರು. ಅಲ್ಲದೆ ಅಶುಚಿತ್ವದ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಸ್ವಚ್ಛಗೊಳಿಸುವಂತೆ ಸೂಚಿಸಿದರು.
ಊಟ ನೀಡಲು ಆದೇಶ: ನಿತ್ಯವೂ ಒಳ ರೋಗಿಗಳಿಗೆ ಹಾಲು, ಹಣ್ಣು ಸೇರಿದಂತೆ ಆಹಾರವನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲವೆಂದು, ಸರಿಯಾಗಿ ವೈದ್ಯ-ಸಿಬ್ಬಂದಿ ಚಿಕಿತ್ಸೆ ಅಥವಾ ತಪಾಸಣೆ ನೀಡುತ್ತಿಲ್ಲವೆಂದು ಅಸಮಾಧಾನ ತೋಡಿಕೊಂಡ ಮಂದಿಯನ್ನು ಸಮಾಧಾನಗೊಳಿಸಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತದಿಂದ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು. ಅಲ್ಲದೆ ಕೂಡಲೇ ಮಧ್ಯಾಹ್ನದ ಊಟಕ್ಕೆ ಆದೇಶಿಸಿದರು.
ನಾಡ ಕಚೇರಿಗೆ ಭೇಟಿ: ಬಳಿಕ ಕುಶಾಲನಗರ ನಾಡ ಕಚೇರಿಗೆ ತೆರಳಿದ ಜಿಲ್ಲಾಧಿಕಾರಿಗಳು, ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರನ್ನು ಕಂಡು ಅಹವಾಲು ಆಲಿಸಿದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳ ಗೈರು ಹಾಜರಿಯೊಂದಿಗೆ, ಸಿಬ್ಬಂದಿಯನ್ನು ವಿಚಾರಿಸಲಾಗಿ, ಗಣಕ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ದಾಖಲಾತಿಗಳನ್ನು ನೀಡಲು ಸಾಧ್ಯವಾಗುತ್ತಿಲ್ಲವೆಂದು ಹಾರಿಕೆಯ ಉತ್ತರ ಬಂತು. ಸ್ವತಃ ಜಿಲ್ಲಾಧಿಕಾರಿಗಳೇ ಯಂತ್ರವನ್ನು ಪರಿಶೀಲಿಸಿ, ಬಿಎಸ್ಎನ್ಎಲ್ ಸಿಬ್ಬಂದಿ ಕರೆಸಿ ಸ್ಥಳದಲ್ಲೇ ದುರಸ್ತಿಗೆ ನಿರ್ದೇಶಿಸಿದರು.
ಅಲ್ಲದೆ ಸಾರ್ವಜನಿಕ ದೂರುಗಳನ್ನು ತಾವೇ ಸ್ವೀಕರಿಸಿ ಮುಂದಿನ ಕ್ರಮ ವಹಿಸುವ ನಿಟ್ಟಿನಲ್ಲಿ ಅಗತ್ಯ ಗಮನ ಹರಿಸಿದರು. ಬಳಿಕ ಜಿಲ್ಲಾ ಕಚೇರಿಗೆ ಹಿಂತಿರುಗಿದ ಶ್ರೀವಿದ್ಯಾ, ಆರೋಗ್ಯ ಇಲಾಖೆಯ ಅಧಿಕಾರಿ ರಾಜೇಶ್ ಮತ್ತು ಸೋಮವಾರಪೇಟೆ ತಹಶೀಲ್ದಾರರನ್ನು ಕರೆಸಿ ಸಾರ್ವಜನಿಕ ದೂರುಗಳ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಸ್ಯೆಯಾಗದಂತೆ ನಿಗಾವಹಿಸುವದರೊಂದಿಗೆ, ತಪ್ಪಿತಸ್ಥ ವೈದ್ಯ-ಸಿಬ್ಬಂದಿಗಳ ವಿರುದ್ಧ ಇಲಾಖಾ ಕ್ರಮಕ್ಕೆ ಸೂಚಿಸಿದರು. ಅಂತೆಯೇ ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಅವರಿಗೆ ನಾಡಕಚೇರಿ ಸಮಸ್ಯೆಗಳನ್ನು ತುರ್ತು ಸರಿಪಡಿಸಿ ಸಾರ್ವಜನಿಕ ಕೆಲಸಗಳ ಸಮರ್ಪಕ ನಿರ್ವಹಣೆಗೆ ಗಮನ ಹರಿಸಲು ತಾಕೀತು ಮಾಡಿದರು.
ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಬಳಿಯಲ್ಲಿ ಪಟ್ಟಣದ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಆಕ್ಷೇಪದ ಹಿನ್ನೆಲೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣದ ಮಾರುಕಟ್ಟೆಯ ಬಳಿಯಲ್ಲೇ ಗುಂಡಿ ತೆಗೆದು ತ್ಯಾಜ್ಯ ವಿಲೇವಾರಿ ಮಾಡುತ್ತಿರುವದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಯಾಗುತ್ತಿದೆ. ಮಾರುಕಟ್ಟೆಗೆ ಬರುವ ವರ್ತಕರು ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ಪದಾಧಿಕಾರಿ ಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ತಕ್ಷಣ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸುವಂತೆ ಶ್ರೀವಿದ್ಯಾ ಅವರು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚಿಸಿದರು.
ವಸತಿ ಶಾಲೆಗೆ ಭೇಟಿ: ನಂತರ ಜಿಲ್ಲಾಧಿಕಾರಿಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ತಹಶೀಲ್ದಾರ್ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.