ಮಡಿಕೇರಿ, ಜು. 25: ಪಿ.ಟಿ. ಉಣ್ಣಿಕೃಷ್ಣ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕದ ಪ್ರಥಮ ಸಭೆ ಇಂದು ನಡೆದ ಸಂದರ್ಭ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಗೈರು ಎದ್ದು ಕಂಡಿತು.
ಸ್ಥಾಯಿ ಸಮಿತಿಗೆ ಆಯ್ಕೆಯಾದ ಎಲ್ಲಾ ಸದಸ್ಯರುಗಳಿಗೂ ಮಾಹಿತಿ ಹೋಗಿದ್ದು, ಇಂದು ಮಧ್ಯಾಹ್ನ 3.30 ಗಂಟೆಗೆ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಸಮಯ ಮೀರಿದರೂ ನಗರಸಭಾಧ್ಯಕ್ಷೆ ಹಾಜರಾತಿ ಮಾತ್ರ ಕಂಡು ಬರಲಿಲ್ಲ. ತನ್ನ ಕೊಠಡಿಯಲ್ಲಿದ್ದರೂ ಅಧ್ಯಕ್ಷರು ಸಭೆಗೆ ಬಾರದ ಬಗ್ಗೆ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾವೇರಮ್ಮ ಸೋಮಣ್ಣ ಅನಿವಾರ್ಯ ಕಾರಣಗಳಿಂದ ಸಭೆಗೆ ಹೋಗಲಿಲ್ಲವೆಂದರೂ, ಪರೋಕ್ಷವಾಗಿ ಸಭೆಗೆ ಹೋಗಲು ಮನಸ್ಸಿರಲಿಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಉಣ್ಣಿಕೃಷ್ಣ ಅವರು ಈ ಬಗ್ಗೆ ‘ಶಕ್ತಿ’ಗೆ ನೀಡಿದ ಹೇಳಿಕೆಯಲ್ಲಿ, ತಾನು ಇಡೀ ನಗರವನ್ನು ಏಕಕಾಲದಲ್ಲಿ ಶುಚಿಗೊಳಿ ಸಬೇಕೆಂಬ ಯೋಜನೆಯನ್ನು ಸಭೆಯಲ್ಲಿ ಮಂಡಿಸಲು ಸಭೆ ಕರೆದಿದ್ದರೂ, ಅಧ್ಯಕ್ಷರು ಬಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಗರದ ಅಭಿವೃದ್ಧಿಗೆ ಕಾವೇರಮ್ಮ ಸೋಮಣ್ಣ ಸಹಕರಿಸುತ್ತಿಲ್ಲವೆಂದು ಅಸಮಾಧಾನ ಹೊರಗೆಡವಿದರು.