ವೀರಾಜಪೇಟೆ, ಜು. 26: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟಕ್ಕೆ ತೆರಳಲು ಪೆರುಂಬಾಡಿ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ವಿಧಿಸಿರುವ ನಿರ್ಬಂಧವನ್ನು ತೆರವು ಗೊಳಿಸುವಂತೆ ಪಟ್ಟಣದ ಆಟೋ ರಿಕ್ಷಾ ಚಾಲಕರ ಪರವಾಗಿ ಚಾಲಕರುಗಳಾದ ನಿಧೀಶ್, ಗೋಪಿ, ಕಿಶೋರ್, ಶರತ್, ರಂಜಿತ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಗಡಿ ಪ್ರದೇಶವಾದ ಕೇರಳ ಮಾಕುಟ್ಟ ಸಂಪರ್ಕ ರಸ್ತೆ ತಾತ್ಕಾಲಿಕವಾಗಿ ದುರಸ್ತಿಗೊಂಡಿದ್ದು ಜಿಲ್ಲಾಧಿಕಾರಿಯವರು ನಾಲ್ಕು ಚಕ್ರದ ವರೆಗಿನ ಲಘು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಿದ್ದಾರೆ. ಅದರಂತೆ ಮೂರು ಚಕ್ರದ ವಾಹನಗಳಾದ ಆಟೋರಿಕ್ಷಾಗಳಿಗೂ ಗಡಿ ಭಾಗದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಆಟೋರಿಕ್ಷಾಗಳು ಮಾಕುಟ್ಟಕ್ಕೆ ತೆರಳಲು ಪೊಲೀಸರು ಕಡಿವಾಣ ಹಾಕಿದ್ದಾರೆ ಎಂದು ಚಾಲಕರು ದೂರಿದ್ದಾರೆ.
ಮಾಕುಟ್ಟಕ್ಕೆ ತೆರಳಲು ಆಟೋ ರಿಕ್ಷಾಗಳಿಗೆ ಪೊಲೀಸರ ನಿರ್ಬಂಧದ ಸಂಬಂಧದಲ್ಲಿ ಇಲ್ಲಿನ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ ನಾಲ್ಕುಚಕ್ರ, ದ್ವಿಚಕ್ರ ಲಘು ವಾಹನಗಳ ಹೊರತು ಪಡಿಸಿದಂತೆ ಇತರ ಯಾವದೇ ವಾಹನಗಳು ಈ ಗಡಿ ರಸ್ತೆಯಲ್ಲಿ ಸಂಚರಿಸಬೇಕಾದರೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕೃತ ಅನುಮತಿ ಅಗತ್ಯವಾಗಿ ಬೇಕೆಂದು ಪ್ರತಿಕ್ರಿಯಿಸಿದ್ದಾರೆ.