ಮಡಿಕೇರಿ, ಜು. 26: ಕೊಡಗು ಅತ್ಯಂತ ಸೂಕ್ಷ್ಮ ಪರಿಸರ ವಲಯವಾಗಿದ್ದು, ಪ್ರವಾಸೋದ್ಯಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಪರಿಸರಕ್ಕೆ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷÀ ಕರ್ನಲ್ ಸಿ.ಪಿ.ಮುತ್ತಣ್ಣ, ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವದನ್ನು ವಿರೋಧಿಸುವದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ಕೊಡಗಿನ ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ, ಪರಿಸರ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಪ್ರವಾಸೋದ್ಯಮದ ವೇಗವನ್ನು ತಡೆಯುವಷ್ಟು ಶಕ್ತಿ ಈ ಸೂಕ್ಷ್ಮ ಪ್ರದೇಶವಾದ ಕೊಡಗಿಗೆ ಇಲ್ಲ. ಜಿಲ್ಲೆಯ ಜನಸಂಖ್ಯೆ ಸುಮಾರು 5.50 ಲಕ್ಷವಿದ್ದರೆ, ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ 15 ಲಕ್ಷವನ್ನು ಮೀರುತ್ತಿದೆ. ಈ ಒತ್ತಡವನ್ನು ಪುಟ್ಟ ಜಿಲ್ಲೆ ತಡೆದುಕೊಳ್ಳಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಈಗ ಇರುವ ಪ್ರವಾಸೋದ್ಯಮವೇ ಪ್ರಸ್ತುತ ಸಾಕಾಗಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ. ಹೆಸರುವಾಸಿ ಪ್ರವಾಸಿ ತಾಣಗಳಾದ ಅಬ್ಬಿ ಜಲಪಾತ, ಇರ್ಪು ಜಲಪಾತ, ತಡಿಯಂಡಮೋಳ್ ಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರತಿದಿನ ಸೀಮಿತ ಪ್ರವಾಸಿಗರಿಗಷ್ಟೆ ಪ್ರವೇಶಾವಕಾಶ ಕಲ್ಪಿಸುವ ಮೂಲಕ ಒತ್ತಡವನ್ನು ನಿಯಂತ್ರಿಸುವ ಕಾರ್ಯವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗಬಲ್ಲ ಯಾವದೇ ಯೋಜನೆಗಳನ್ನು ವಿರೋಧಿಸುವದಾಗಿ ಅವರು ಹೇಳಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಭೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಖಾಸಗಿ ವನ್ಯಜೀವಿಧಾಮ’ ಯೋಜನೆಯನ್ನು ಜಾರಿಗೆ ತರುವ ಕುರಿತು ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯ ಪ್ರಕಾರ ಅರಣ್ಯದ ಅಂಚಿನಲ್ಲಿರುವ ಖಾಸಗಿ ಭೂಮಿಯನ್ನು ಅದರ ಮಾಲೀಕರು ಅರಣ್ಯ ಅಭಿವೃದ್ಧಿಗೆ ಮೀಸಲಿಡುವದು ಮತ್ತು ಅವರದ್ದೆ ಒಡೆತನದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ರೆಸಾರ್ಟ್ ಇನ್ನಿತರ ಚಟುವಟಿಕೆಗೆ ಬಳಸಿಕೊಳ್ಳುವ ಬಗ್ಗೆ ಅವಕಾಶ ನೀಡುವದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ಯೋಜನೆಗೆ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದೆಯೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು.

ಖಾಸಗಿ ವನ್ಯಧಾಮ ಅಭಿವೃದ್ಧಿಯ ನೆಪದಲ್ಲಿ ಹೊರ ರಾಜ್ಯಗಳಿಂದ ಬರುವ ಬಂಡವಾಳಶಾಹಿಗಳು ರೆಸಾರ್ಟ್‍ಗಳನ್ನು ನಿರ್ಮಿಸಿ ಮೂಲ ನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು, ಆದರೆ, ಕೊಡಗು ಮಲೆನಾಡು ಪ್ರದೇಶವಾಗಿರುವ ಕಾರಣ ಯಾವ ರೀತಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಬಗ್ಗೆ ವಿಭಿನ್ನ ರೀತಿಯಲ್ಲಿ ಚಿಂತನೆ ನಡೆಯಬೇಕಾಗಿದೆ. ಇದಕ್ಕಾಗಿ ಪರ, ವಿರೋಧ ಹೇಳಿಕೆಗಳನ್ನು ನೀಡುವ ಬದಲು ಜನಪ್ರತಿನಿಧಿಗಳು ಮತ್ತು ಪರಿಸರವಾದಿಗಳು ಒಂದೇ ವೇದಿಕೆಯಲ್ಲಿ ಸಮಾಲೋಚನೆ ನಡೆಸಿ ಅಭಿಪ್ರಾಯ ಹಂಚಿಕೆಯ ಮೂಲಕ ಕೊಡಗಿನ ಕುರಿತು ಕಾಳಜಿ ತೋರಬೇಕಾಗಿದೆ ಎಂದು ಕರ್ನಲ್ ಮುತ್ತಣ್ಣ ತಿಳಿಸಿದರು.

ಉಪಾಧ್ಯಾಯರಿಗೆ ಪರಿಸರದ ಪಾಠ

ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅವರು ಪರಿಸರ ಮತ್ತು ಪರಿಸರವಾದಿಗಳ ಬಗ್ಗೆ ಟೀಕೆ ಮಾಡಿರುವದನ್ನು ಖಂಡಿಸುವದಾಗಿ ತಿಳಿಸಿದ ಕರ್ನಲ್ ಮುತ್ತಣ್ಣ, ಪರಿಸರದ ಬಗ್ಗೆ ಮಾಹಿತಿಯ ಕೊರತೆಯನ್ನು ಎದುರಿಸುತ್ತಿರುವ ಸುಬ್ರಹ್ಮಣ್ಯ ಉಪಾಧ್ಯಾಯರು ನಮ್ಮ ಬಳಿ ಬಂದರೆ ಪರಿಸರದ ಪಾಠ ಮಾಡುವದಾಗಿ ಹೇಳಿದರು. ಉಪಾಧ್ಯಾಯರು ಬಿಜೆಪಿ ವಕ್ತಾರರೆ ಅಥವಾ ಕೇರಳದ ಟಿಂಬರ್ ಲಾಬಿ ವಕ್ತಾರರೆ ಎಂಬ ಬಗ್ಗೆ ಸಂಶಯವಿದೆಯೆಂದು ಆರೋಪಿಸಿದರು.

ಎಕೆಎಸ್ ಹೇಳಿಕೆಗೆ ಆಕ್ಷೇಪ

ಬಾಣೆ ಜಮೀನನ್ನು ಅರಣ್ಯಕ್ಕೆ ಸೇರಿಸುವ ಹುನ್ನಾರವನ್ನು ಪರಿಸರವಾದಿಗಳು ಮಾಡುತ್ತಿದ್ದಾರೆ ಎಂದು ವಕೀಲ ಎ.ಕೆ.ಸುಬ್ಬಯ್ಯ ಅವರು ಇತ್ತೀಚೆಗೆ ಆರೋಪ ಮಾಡಿದ್ದಾರೆ ಎಂದು ಹೇಳಿದ ಕರ್ನಲ್ ಮುತ್ತಣ್ಣ, ವಿನಾಕಾರಣ ಹೇಳಿಕೆಗಳನ್ನು ನೀಡುವ ಬದಲು ಸಂಬಂಧಿಸಿದ ಪರಿಸರವಾದಿಯ ಹೆಸರನ್ನು ಬಹಿರಂಗಗೊಳಿಸಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತರುಣ್ ಕಾರ್ಯಪ್ಪ ಹಾಗೂ ಸಿ.ಕೆ.ಪೂವಯ್ಯ ಉಪಸ್ಥಿತರಿದ್ದರು.