ಮಡಿಕೇರಿ, ಜು. 25 : ಮಾನವೀಯ ಮೌಲ್ಯಗಳನ್ನು ಮರೆತು ಮಾನಸಿಕ ರೋಗಿಗಳನ್ನು ತಿರಸ್ಕಾರ ಮನೋಭಾವದಿಂದ ಕಾಣುವದು ಕಾನೂನಿನ ಚೌಕಟ್ಟಿನಲ್ಲಿ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ.

ವಿಕಾಸ್ ಜನ ಸೇವಾ ಟ್ರಸ್ಟ್ ಹಾಗೂ ಪ್ರಜಾಸತ್ಯ ಪತ್ರಿಕೆಯ ಸಹಯೋಗದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ “ವಿಕಾಸ ಅಭಿಯಾನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿರುವ ವಯೋವೃದ್ಧರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನೊಂದವರಿಗೆ ಪ್ರೀತಿ, ವಾತ್ಸಲ್ಯ ತೋರದೆ ಕುಟುಂಬದಿಂದ ಹೊರ ಇಡುವಂತಹ ಪ್ರಯತ್ನಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನೂರುನ್ನಿಸಾ, ಮಾನವೀಯ ಮೌಲ್ಯಗಳನ್ನು ಮರೆತು ವಯೋವೃದ್ಧರನ್ನು ಮತ್ತು ಮಾನಸಿಕ ಅಸ್ವಸ್ಥರನ್ನು ಕಡೆಗಣಿಸುವದು ಅಪರಾಧವೆಂದರು.

ಮಾನಸಿಕ ಅಸ್ವಸ್ಥರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ ಉಚಿತ ಚಿಕಿತ್ಸೆ ದೊರೆಯಲು ಸಹಕರಿಸಬೇಕು ಮತ್ತು ಕಾನೂನಿನ ಸಲಹೆ ಪಡೆಯಲು ಮುಂದಾಗ ಬೇಕೆಂದು ಸಲಹೆ ನೀಡಿದರು. ಕೊಡಗನ್ನು ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲು ಸಮಾಜದ ಕೊಡುಗೆಯೂ ದೊಡ್ಡದು ಎಂದು ನೂರುನ್ನಿಸ್ಸಾ ತಿಳಿಸಿದರು.

ಉಪವಿಭಾಗಧಿಕಾರಿ ನಂಜುಡೇಗೌಡ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳೇ ಪೋಷಕರನ್ನು ಅನಾಥರನ್ನಾಗಿ ಮಾಡುತ್ತಿದ್ದು, ಇದುವೇ ವಯೋವೃದ್ಧರ ಮಾನಸಿಕ ಖಿನ್ನತೆಗೆ ಕಾರಣವೆಂದು ಅಭಿಪ್ರಾಯಪಟ್ಟರು. ಮಕ್ಕಳು ತಮ್ಮ ಪೋಷಕರನ್ನು ಮಕ್ಕಳಂತೆ ಸಲಹಿ, ಗೌರವಿಸಿದಾಗ ಮಾತ್ರ ಮಾನಸಿಕ ಒತ್ತಡಕ್ಕೆ ಒಳಗಾಗುವದನ್ನು ನಿಯಂತ್ರಿಸಬಹು ದಾಗಿದೆ ಎಂದರು.

ಮಾನಸಿಕ ರೋಗಿಗಳನ್ನು ಗುರುತಿಸುವ ಬದಲು ಮಾನಸಿಕ ರೋಗಿಗಳನ್ನಾಗಿ ಮಾಡುತ್ತಿರುವವರನ್ನು ಗುರುತಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ. ಕೊಡಗನ್ನು ಮಾನಸಿಕ ಅಸ್ಪಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಂಘ, ಸಂಸ್ಥೆಗಳು ಮಾತ್ರವಲ್ಲದೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕೆಂದರು.

ಮಕ್ಕಳ ತಜ್ಞರು ಹಾಗೂ ಪ್ರಜಾಸತ್ಯ ಸಂಪಾದಕ ಬಿ.ಸಿ.ನವೀನ್ ಕುಮಾರ್ ಮಾತನಾಡಿ ಮಾನವೀಯ ಮೌಲ್ಯಗಳನ್ನು ಉಳಿಸುವ ಮತ್ತು ಮಾನಸಿಕ ಅಸ್ವಸ್ಥರನ್ನು ರಕ್ಷಿಸುವಂತಹ ಕೆಲಸ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಂದಿನ ಮುಂದುವರೆದ ಜಗತ್ತಿನಲ್ಲಿ ಪ್ರತಿ ನೂರರಲ್ಲಿ ಎಂಟು ಜನ ಮಾನಸಿಕ ರೋಗಗಳಿಂದ ಬಳಲುತ್ತಿರುವದು ಬೇಸರ ಸಂಗತಿ ಎಂದರು.

ದೇಶದಲ್ಲಿ 35 ಲಕ್ಷ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಚಿಕಿತ್ಸೆಯ ಅವಶ್ಯಕತೆಯಿದ್ದು, ಇದೊಂದು ಅತ್ಯಂತ ತುರ್ತು ಹಾಗೂ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಸೇವಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಉತ್ತಮ ಮಾರ್ಗವನ್ನು ಕಂಡುಕೊಂಡಂತಾಗಿದೆ.

ಮಾನಸಿಕ ಅಸ್ವಸ್ಥತೆಯಿಂದ ದೂರವಿರಲು ಧ್ಯಾನ, ಯೋಗ, ಆಧ್ಯಾತ್ಮಿಕ ಚಿಂತನೆ, ಸಂಗೀತ ಸಾಹಿತ್ಯ, ಕುಟುಂಬಸ್ಥರೊಂದಿಗೆ ಉತ್ತಮ ಸಂಬಂಧ ಇವುಗಳು ಉತ್ತಮ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಯಾಗಲಿವೆ ಹಾಗೂ ಇದರಿಂದ ಮಾನಸಿಕ ಅಸ್ವಸ್ಥರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಮ್ತಾಜ್ ಅವರು ಮಾತನಾಡಿ ಅನಾಥ ಮಾನಸಿಕ ಅಸ್ವಸ್ಥರೊಂದಿಗಿನ ಒಡನಾಟವನ್ನು ಹಂಚಿಕೊಂಡು ಅವರು ಅನುಭವಿಸು ತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸುತ್ತಾ ಅವರ ಪುನರ್ವಸತಿ ಬಗ್ಗೆ ಹೃದಯಪೂರ್ವಕವಾಗಿ ಎಲ್ಲರೂ ಕೆಲಸ ಮಾಡಬೇಕು. ಮತ್ತು ಅರಿವು ಮೂಡಿಸುವಂತಾಗಬೇಕು ಎಂದು ನುಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೈದ್ಯರಾದ ಡಾ.ರೂಪೇಶ್ ಅವರು ಮಾತನಾಡಿ ರಸ್ತೆಯಲ್ಲಿ ಅನಾಥವಾಗಿ ಓಡಾಡುವವರೆಲ್ಲಾ ಮಾನಸಿಕ ಅಸ್ವಸ್ಥರಲ್ಲ. ಸರ್ಕಾರವು ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆಗೆ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿದ್ದು ಇಂತವರ ರಕ್ಷಣೆಗೆ ಹಾಗೂ ಪುನರ್ವಸತಿಗೆ ದಾರವಾಡ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ ಸಹ ಕೆಲವೊಂದು ಸಂದರ್ಭದಲ್ಲಿ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳಲು ರೋಗಿಗಳು ಹಿಂದೇಟು ಹಾಕುತ್ತಾರೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಮಾತನಾಡಿ ವಿಕಾಸ ಜನಸೇವ ಟ್ರಸ್ಟ್ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಶ್ಲಾಘಿಸುತ್ತಾ ಎಲ್ಲರೂ ಅನಾಥ, ಮಾನಸಿಕ ಅಸ್ವಸ್ಥರನ್ನು ರಕ್ಷಿಸಲು ಟ್ರಸ್ಟ್‍ನೊಂದಿಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ, ವಿಕಾಸ ಜನ ಸೇವಾಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ವಿಕಲಚೇತನರಿಗೆ ಸಾಧನೆ ಸಲಕರಣೆ ವಿತರಿಸಲಾಯಿತು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ದೇವರಾಜು, ಆರ್.ಸಿ.ಎಚ್ ಅಧಿಕಾರಿ ಡಾ.ನೀಲೇಶ್, ವಿಕಾಸ ಜನ ಸೇವಾಟ್ರಸ್ಟ್‍ನ ಅಧ್ಯಕ್ಷ ಎಚ್.ಕೆ.ರಮೇಶ್, ವಿಕಾಸ ಜನ ಸೇವಾಟ್ರಸ್ಟ್‍ನ ಗೌರವಾಧ್ಯಕ್ಷÀ ಹೆಚ್.ಪಿ.ಪುಟ್ಟಪ್ಪ, ಆಶಾ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಸ್ವಾಗತಿಸಿ, ವಂದಿಸಿದರು. ಟ್ರಸ್ಟ್‍ನ ಹಿರಿಯರು ಹಾಗೂ ಗೌರವಾಧ್ಯಕ್ಷ ಹೆಚ್.ಪಿ.ಪುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು.