ಗೋಣಿಕೊಪ್ಪ ವರದಿ, ಜು. 25: ಸ್ವಚ್ಛತೆಗೆ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಕೈಜೋಡಿಸಿ ಸ್ವಚ್ಛ ಗೋಣಿಕೊಪ್ಪ ಪಟ್ಟಣವಾಗಿ ಮಾರ್ಪಡಿಸುವ ನಿರ್ಧಾರವನ್ನು ಇಲ್ಲಿನ ಕಕೂನ್ ಸಭಾಂಗಣದಲ್ಲಿ ಗೋಣಿಕೊಪ್ಪ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಸ್ಥಾನೀಯ ಸಮಿತಿ ಮಹಾಸಭೆಯಲ್ಲಿ ಕೈಗೊಳ್ಳಲಾಯಿತು.
ಗೋಣಿಕೊಪ್ಪ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದಲ್ಲಿನ ಕಸ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು. ಕಸ ನಿರ್ವಹಣೆಯಲ್ಲಿ ವರ್ತಕರು ಹೆಚ್ಚು ಮುತುವರ್ಜಿ ವಹಿಸಲು ಮುಂದಾಗಬೇಕು. ಪ್ಲಾಸ್ಟಿಕ್ ಬ್ಯಾಗ್ ಬಳಕೆ ಸಂಪೂರ್ಣವಾಗಿ ನಿಷೇಧಿಸುವದಲ್ಲದೆ, ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತೆಗೆ ಸ್ಥಳೀಯ ಪಂಚಾಯಿತಿಗೆ ಸಂಪೂರ್ಣ ಸಹಕಾರ ನೀಡುವ ನಿರ್ಧಾರ ತೆಗೆದುಕೊಂಡರು.
ಪ್ರತಿ 10 ಅಂಗಡಿಗಳಿಗೊಂದು ಕಸ ಹಾಕದಂತೆ ಫಲಕ ನೇತು ಹಾಕುವದು, ಬಟ್ಟೆ ಬ್ಯಾಗ್ಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುವಂತೆ ನಿರ್ಧರಿಸಲಾಯಿತು.
ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಗ್ರಾಮ ಪಂಚಾಯಿತಿ ಮೂಲಕ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಪತ್ತೆಗೆ ಮುಂದಾಗಲಿದೆ. ಅಲ್ಲದೆ, ಸರ್ಕಾರ ಕೂಡ ಎಲ್ಲಾ ಇಲಾಖೆಗಳಿಗೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರ ನೀಡಿರುವದರಿಂದ ಸ್ವಚ್ಛತೆಗೆ ಸಹಕಾರಿಯಾಗಲಿದೆ ಎಂದರು.
ಬೈಪಾಸ್ ರಸ್ತೆಯಲ್ಲಿ ಕೂಡ 15 ದಿನಗಳಿಗೊಮ್ಮೆ ಪಾರ್ಕಿಂಗ್ ರಸ್ತೆ ಎರಡು ಬದಿಗಳನ್ನು ನಿಗದಿಗೊಳಿಸುವಂತೆ, ಈ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾರ್ಪಡಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ನಿರ್ಧರಿಸಲಾಯಿತು. ಪಟ್ಟಣದ ಟ್ರಾಫಿಕ್ ವ್ಯವಸ್ಥೆ ನಿಭಾಯಿಸಲು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿರುವದರಿಂದ ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲು ನಿರ್ಣಯ ತೆಗೆದುಕೊಳ್ಳಲಾಯಿತು.
ವರ್ತಕರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಪಡೆಯುವ ಲೈಸೆನ್ಸ್ ದುಬಾರಿ ವೆಚ್ಚವಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪಟ್ಟಣ ಒಳಪಡುವದರಿಂದ ದರವನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಖಜಾಂಜಿ ಮನೋಹರ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಸಮಿತಿಯ ಅಂಗ ಸಂಸ್ಥೆಯಾದ ಗೋಣಿಕೊಪ್ಪ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಲೆಕ್ಕ ಮಂಡಿಸಿದರು. ಕಾರ್ಯದರ್ಶಿ ಕಾಶಿ ವಾರ್ಷಿಕ ವರದಿ ವಾಚಿಸಿದರು.
ಮೃತಪಟ್ಟ ಸದಸ್ಯರುಗಳಾದ ಲಿಂಗರಾಜು ಹಾಗೂ ಚೆಪ್ಪುಡೀರ ದೇವಯ್ಯ ಅವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಈ ಸಂದರ್ಭ ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ನಿರ್ದೇಶಕ ಅಜಿತ್ ಅಯ್ಯಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇಶವ ಕಾಮತ್, ಎಫ್ಕೆಸಿಸಿ ನಿರ್ದೇಶಕ ಗಿರೀಶ್ ಗಣಪತಿ ಉಪಸ್ಥಿತರಿದ್ದರು. ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು.