ಮಡಿಕೇರಿ ಜು.26 : ವಕೀಲ ಹಾಗೂ ಮಡಿಕೇರಿಯ ವಕೀಲರ ಸಂಘದ ನಿರ್ದೇಶಕ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಬ್ಬರನ್ನು ಮುಂದಿನ ಎರಡು ದಿನಗಳಲ್ಲಿ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಕೀಲರು ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವದು ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.15ರಂದು ಭಾಗಮಂಡಲ ಪಟ್ಟಣದಲ್ಲಿ ವಕೀಲರಾದ ಪಿ.ಟಿ.ಭಾನುಪ್ರಕಾಶ್ ಮತ್ತು ಅವರ ಪತ್ನಿ ಎಂ.ವಿ. ಪ್ರಿಯ ಅವರಿದ್ದ ಕಾರನ್ನು ತಡೆದ ಸಣ್ಣಪುಲಿಕೋಟು ಗ್ರಾಮದ ಕೆ.ಯು.ಚರಣ್, ಕೆ.ಯು.ರಂಜಿತ್ ಅವರುಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪ್ರಿಯ ಅವರ ನೀಡಿರುವ ದೂರಿನ ಅನ್ವಯ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.

ಈ ಹಲ್ಲೆ ಪ್ರಕರಣವನ್ನು ಖಂಡಿಸಿ ಮಡಿಕೇರಿ ವಕೀಲರ ಸಂಘವು ತುರ್ತು ಸಭೆ ನಡೆಸಿ ತಾ.16ರಂದು ಒಂದು ದಿನದ ಮಟ್ಟಿಗೆ ಸ್ವಯಂಪ್ರೇರಿತವಾಗಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಜಿಲ್ಲೆಯ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ ಎಂದು ದೂರಿದರು.

ಈ ಸಂಬಂಧವಾಗಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದು, ವಕೀಲರು ಮತ್ತು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಇಂತಹ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬದನ್ನು ಮನವರಿಕೆ ಮಾಡಲಾಗಿದೆ. ಈ ಸಂಬಂಧ ಎರಡು ದಿನಗಳ ಕಾಲಾವಕಾಶವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದು, ಮುಂದಿನ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮಡಿಕೇರಿ ವಕೀಲರ ಸಂಘವು ವಿಶೇಷ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಿದೆ. ಅಲ್ಲದೆ ಈ ಬಗ್ಗೆ ಕರ್ನಾಟಕ ವಕೀಲರ ಪರಿಷತ್ ಹಾಗೂ ಜಿಲ್ಲೆಯ ಇತರ ವಕೀಲರ ಸಂಘದ ಸಹಕಾರ ಪಡೆದು ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವದು ಎಂದರು.

ಗೋಷ್ಠಿಯಲ್ಲಿ ಹಾಜರಿದ್ದ ಸಂಘದ ಹಾಗೂ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕ ಎಂ.ಸಿ.ಜ್ಯೋತಿಶಂಕರ್ ಮಾತನಾಡಿ, ಭಾಗಮಂಡಲದ ಕಾವೇರಿ ವಿದ್ಯಾಸಂಸ್ಥೆಯನ್ನು ಆದಿಚುಂಚನಗಿರಿ ಮಠದ ಉಸ್ತುವಾರಿಗೆ ವಹಿಸಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಮಠದ ಜೊತೆ ಮಾತುಕತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಭಾನುಪ್ರಕಾಶ್ ಅವರು ಹಳೆ ವಿದ್ಯಾರ್ಥಿ ಸಂಘಕ್ಕೆ ಮರು ಜೀವ ನೀಡುವ ನಿಟ್ಟಿನಲ್ಲಿ ವಾಟ್ಸ್ ಆಪ್ ಗ್ರೂಪ್‍ನ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಹಳೆ ವಿದ್ಯಾರ್ಥಿ ಸಂಘಕ್ಕೆ ಮರು ಜೀವ ನೀಡಿದಲ್ಲಿ ಕಾವೇರಿ ವಿದ್ಯಾಸಂಸ್ಥೆಯನ್ನು ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಡ್ಡಿಯಾಗಬಹುದೆಂಬ ಉದ್ದೇಶದಿಂದ ಆರೋಪಿಗಳು ಭಾನುಪ್ರಕಾಶ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಶಂಕೆ ಇದೆ ಎಂದು ಆರೋಪಿಸಿದರು. ಆದರೆ ವಿದ್ಯಾಸಂಸ್ಥೆಯ ಯಾವದೇ ಸ್ವತ್ತನ್ನು ಹಸ್ತಾಂತರಿಸುವ ಮತ್ತು ಷರತ್ತುಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಂಘದ ಜಂಟಿ ಕಾರ್ಯದರ್ಶಿ ಡಿ.ಎಂ.ಕೇಶವ ಅವರು ಮಾತನಾಡಿ, ವಕೀಲರ ಮೇಲಿನ ಹಲ್ಲೆಯನ್ನು ಖಂಡಿಸಿ ಮಡಿಕೇರಿ ವಕೀಲರ ಸಂಘ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದ ಸಂದರ್ಭ ಜಿಲ್ಲೆಯ ಇತರ ವಕೀಲರ ಸಂಘಗಳು ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಯು.ಪ್ರೀತಂ, ಖಜಾಂಚಿ ಬಿ.ಸಿ.ದೇವಿಪ್ರಸಾದ್, ನಿರ್ದೇಶಕಿ ಜೆ.ಜೆನಿತ್ ಇಮ್ಯಾಕುಲೇಟ್ ಹಾಜರಿದ್ದರು.