ಮಡಿಕೇರಿ, ಜು. 25: ಬೆಲ್ಜಿಯಂ ನಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕೊಡಗು ಮೂಲದ ಹಾಕಿಪಟು ಮಲ್ಲಮಾಡ ಲೀಲಾವತಿ ಇಂದು ಜಿಲ್ಲೆಗೆ ಆಗಮಿಸಿದ ಸಂದರ್ಭ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ವತಿಯಿಂದ ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿ ಕೊಳ್ಳಲಾಯಿತು.

ಬೆಕ್ಕೆಸೊಡ್ಲೂರುವಿನ ಮಲ್ಲಮಾಡ ಜಯ ಹಾಗೂ ವಾಣಿ ದಂಪತಿಯ ಪುತ್ರಿಯಾಗಿರುವ ಮಲ್ಲಮಾಡ ಲೀಲಾವತಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿನಿ. ತಾ. 13 ರಿಂದ 23 ರವರೆಗೆ ಬೆಲ್ಜಿಯಂನಲ್ಲಿ ನಡೆದ ಸಿಕ್ಸ್ ನೇಷನ್ಸ್ ಇನ್‍ವಿಟೇಷನ್ ಹಾಕಿ ಪಂದ್ಯಾಟದಲ್ಲಿ ‘ಅಂಡರ್ 23’ ವಿಭಾಗದಲ್ಲಿ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆದು ಆಟವಾಡಿದ್ದಾಳೆ.

ಬೆಲ್ಜಿಯಂ, ಕೆನಡಾ, ಐರ್ಲೆಂಡ್, ಗ್ರೇಟ್‍ಬ್ರಿಟನ್, ಹಾಲೆಂಡ್ ಮುಂತಾದ ಹಾಕಿ ತಂಡಗಳ ವಿರುದ್ಧ ಭಾರತ ಹಾಕಿ ತಂಡ ಸೆಣಸಾಡಿತು. ಅಂತಿಮ ಪಂದ್ಯಾಟದಲ್ಲಿ ಹಾಲೆಂಡ್ ವಿರುದ್ಧ 1-6 ಗೋಲುಗಳ ಅಂತರದಲ್ಲಿ ಭಾರತ ಸೋಲು ಕಂಡಿತಾದರೂ ಆ ಪಂದ್ಯದಲ್ಲಿ ಭಾರತ ಪರ ಮಲ್ಲಮಾಡ ಲೀಲಾವತಿ ಏಕೈಕ ಗೋಲು ಬಾರಿಸಿ ದ್ದಳೆನ್ನುವದು ವಿಶೇಷ. ಲೀಲಾವತಿ ಈ ಹಿಂದೆ ‘ಅಂಡರ್ 18’ ಏಷ್ಯಾಕಪ್ ಪಂದ್ಯಾವಳಿಯಲ್ಲೂ ಭಾಗವಹಿಸಿದ್ದಳು.

ಬೆಲ್ಜಿಯಂನಲ್ಲಿ ಭಾರತವನ್ನು ಪ್ರತಿನಿಧಿಸಿದ ಕುರಿತು ಮಾಧ್ಯಮ ಗಳೊಂದಿಗೆ ಹರ್ಷ ವ್ಯಕ್ತಪಡಿಸಿದ ಲೀಲಾವತಿ, ಕ್ರೀಡೆಯಲ್ಲಿ ನಮ್ಮಷ್ಟೆ ನೈಪುಣ್ಯತೆ ಹೊರ ದೇಶದ ಆಟಗಾರರಲ್ಲೂ ಇದೆ, ಅವರಿಂದಲೂ ನಾವು ಕಲಿಯಬೇಕಾದ ಹಲವು ವಿಷಯಗಳಿವೆ ಎಂದು ಅನಿಸಿಕೆ ವ್ಯಕ್ತಪಡಿಸಿದಳು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ, ಉಪನ್ಯಾಸಕ ಬಾಣೆಗದ್ದೆ ಪ್ರದೀಪ್, ದೈಹಿಕ ನಿರ್ದೇಶಕರಾದ ರಮೇಶ್, ಪವನ್‍ಕೃಷ್ಣ, ಮರ್ಕರ ಯುನೈಟೆಡ್ ಹಾಕಿ ಕ್ಲಬ್‍ನ ಕೋಚ್ ಸಂತೋಷ್ ಕಾರ್ಯಪ್ಪ, ಮಂಗಳೂರು ವಿವಿ.ಯ ಹಾಕಿ ಆಟಗಾರ್ತಿಯರು ಲೀಲಾವತಿಯನ್ನು ಬರಮಾಡಿ ಕೊಂಡರು.