*ಗೋಣಿಕೊಪ್ಪಲು, ಜು. 25 : ರಸ್ತೆಯಲ್ಲಿ ಬಿದ್ದಿರುವ ಹೊಂಡ ತಪ್ಪಿಸಲು ಹೋಗಿ ಕಾರೊಂದು ಮಗುಚಿ ಬಿದ್ದಿರುವ ಘಟನೆ ತಿತಿಮತಿ ಗೋಣಿಕೊಪ್ಪಲು ನಡುವಿನ ಭದ್ರಗೋಳದಲ್ಲಿ ಜರುಗಿದೆ. ರಸ್ತೆಯಿಂದ ಸೇತುವೆ ಕೆಳಗೆ ಹಾರಿರುವ ಕಾರು ತಲೆ ಕೆಳಗಾಗಿ ಬಿದ್ದಿದೆ. ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು ಕಡೆಯಿಂದ ಗೋಣಿಕೊಪ್ಪಲಿನತ್ತ ಬರುತ್ತಿದ್ದ ಕಾರು ಭದ್ರಗೋಳದ ಹೆದ್ದಾರಿಯಲ್ಲಿ ಬಿದ್ದಿರುವ ದೊಡ್ಡ ಹೊಂಡವನ್ನು ತಪ್ಪಿಸಲು ಚಾಲಕ ನವೀನ್ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಮಗುಚಿ ಬಿದ್ದಿದೆ. ಇದೇ ಜಾಗದಲ್ಲಿ ಕಳೆದ ಎರಡು ದಿನಗಳಲ್ಲಿ 5 ಅಪಘಾತಗಳು ಸಂಭವಿಸಿವೆ. ಮಂಗಳವಾರ ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಾಹನವೂ ಉರುಳಿ ಬಿದ್ದು ಜಖಂಗೊಂಡಿತ್ತು. ಆದರೆ ವಿದ್ಯಾರ್ಥಿಗಳಿಲ್ಲದ್ದರಿಂದ ಯಾವದೇ ಅನಾಹುತ ಸಂಭವಿಸಲಿಲ್ಲ. ಚಾಲಕನಿಗೆ ಪೆಟ್ಟು ಬಿದ್ದಿತ್ತು.
ಭದ್ರಗೋಳದ ಬಳಿಯ ಹೆದ್ದಾರಿಯ ಸೇತುವೆ ಬಳಿ ರಸ್ತೆ ಬಹಳ ತಗ್ಗಿನಿಂದ ಕೂಡಿದೆ. ಜತೆಗೆ ಈ ಸ್ಥಳದಲ್ಲಿ ಭಾರೀ ಹೊಂಡ ಬಿದ್ದು ವಾಹನ ಸಂಚಾರಕ್ಕೆ ತೀರ ದುಸ್ತರವಾಗಿದೆ. ಹೆದ್ದಾರಿಯ ಎರಡೂ ದಿಕ್ಕಿನಿಂದ ವೇಗವಾಗಿ ಬರುವ ವಾಹನಗಳು ಹೊಂಡಕ್ಕೆ ಬಿದ್ದು ಅಪಾಯ ಎದುರಿಸುತ್ತಿವೆ. ಅಂದಾಜು 500 ಮೀಟರ್ ದೂರದ ರಸ್ತೆಯನ್ನು ಎತ್ತರಿಸಿ ಮರು ನಿರ್ಮಾಣ ಮಾಡಬೇಕು. ಆಗಾಗ್ಗೆ ಸಂಭವಿಸುತ್ತಿರುವ ಅಪಘಾತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.
ಚಿತ್ರ ವರದಿ: ಎನ್.ಎನ್.ದಿನೇಶ್