ಸುಂಟಿಕೊಪ್ಪ, ಜು. 26: ವರ್ಷಾಧಾರೆಯ ಆರ್ಭಟದಿಂದ ಸುಂಟಿಕೊಪ್ಪ ಮಧುರಮ್ಮ ಬಡಾವಣೆ ಅಂಗವನಾಡಿ ಕೇಂದ್ರದಲ್ಲಿ ಜಲ ಉಕ್ಕಿ ಬರುತ್ತಿದ್ದು ಪುಟಾಣಿ ಮಕ್ಕಳು ಶಿಕ್ಷಕಿ, ಸಹಾಯಕರು ಭಯಭೀತರಾಗಿ ಕಾರ್ಯನಿರ್ವಹಿಸುವಂತಾಗಿದೆ.
ಈ ಪ್ರದೇಶದಲ್ಲಿ ಹಿಂದೆ ಕೆರೆಯಿದ್ದು ಕಾಲಕ್ರಮೇಣ ಕೆರೆಯನ್ನು ಮುಚ್ಚಿ ಅಂಗನವಾಡಿ ಕೇಂದ್ರ ಸೇರಿದಂತೆ ವಸತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಅಂಗನವಾಡಿ ಕೇಂದ್ರದ ಅಡಿಪಾಯದಿಂದ ಜಲ ಉಕ್ಕಿ ಬರುತ್ತಿದ್ದು ಕಟ್ಟಡಕ್ಕೆ ಇಂದೋ ನಾಳೆಯೋ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮ ಪಂಚಾಯಿತಿ, ತಾ.ಪಂ. ಆಡಳಿತ ಮಂಡಳಿ ಈ ಬಗ್ಗೆ ಕ್ರಮ ವಹಿಸಿ ಮುಂಜಾಗ್ರತಾ ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.