ಸೋಮವಾರಪೇಟೆ, ಜು.26: ಜಾಗತಿಕ ಯುಗದಲ್ಲಿ ಇಂಗ್ಲೀಷ್ ಭಾಷೆ ವ್ಯಾವಹಾರಿಕವಾಗಿ ಅನಿವಾರ್ಯ ವಾದರೂ ಬದುಕಿನ ಭಾಷೆಯಾಗಿರುವ ಕನ್ನಡಕ್ಕೆ ಪ್ರತಿಯೋರ್ವರೂ ಪ್ರಥಮ ಆದ್ಯತೆ ನೀಡಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಆಲೂರು ಸಿದ್ದಾಪುರದಲ್ಲಿ ತಾಲೂಕು ಕಸಾಪದಿಂದ ಆಯೋಜಿಸ ಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ನೆಲ ಜಲದ ರಕ್ಷಣೆಯಾಗಬೇಕು ಎಂದು ಒತ್ತಿ ಹೇಳಿದ ಶಾಸಕರು, ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉತ್ತಮ ರಸ್ತೆ, ವಿದ್ಯುತ್ ಸಂಪರ್ಕಗಳು ಪ್ರಗತಿಯ ಸಂಕೇತಗಳಾಗಿದ್ದು, ಪರಿಸರ ರಕ್ಷಣೆಯ ಕಾರ್ಯ ಆಗಬೇಕು ಎಂದರು.
ಪ್ರಸಕ್ತ ಸಾಲಿನ ಮಳೆಯಿಂದ ಕೊಡಗಿನಲ್ಲಿ ಹಲವಷ್ಟು ಮನೆ, ಕೃಷಿಗೆ ಹಾನಿಯಾಗಿದ್ದು, ಕೊಡಗಿಗೆ ವಿಶೇಷ ಪ್ಯಾಕೇಜ್ ಕಲ್ಪಿಸುವಂತೆ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದು ಮನವಿ ಮಾಡಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಜಾಗೃತಿ ಸಮಿತಿಯ ಸದಸ್ಯೆ ರಾಣಿ ಚಂದ್ರಶೇಖರ್ ವಹಿಸಿದ್ದರು. ಲೇಖಕಿ ಶ.ಗ. ನಯನತಾರ ಆಶಯ ನುಡಿಯಾಡಿದರು. ಕೃಷಿ ಪ್ರಧಾನವಾದ ಸೋಮವಾರಪೇಟೆ ತಾಲೂಕು ವಿಷಯದ ಬಗ್ಗೆ ಹೆಬ್ಬಾಲೆ ಸಂ.ಪ.ಪೂ. ಕಾಲೇಜು ಉಪನ್ಯಾಸಕ ವೆಂಕಟ್ ನಾಯಕ್, ಶಿಕ್ಷಣ ಕ್ಷೇತ್ರದಲ್ಲಿ ತಾಲೂಕಿನ ಸಾಧನೆ ಬಗ್ಗೆ ಕುಶಾಲನಗರ ಸ.ಪ್ರೌ.ಶಾ. ಶಿಕ್ಷಕ ಉ.ರಾ. ನಾಗೇಶ್, ಕ್ರೀಡಾ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ವಿಷಯದ ಬಗ್ಗೆ ಶಿರಂಗಾಲದ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಅವರುಗಳು ವಿಚಾರ ಮಂಡಿಸಿದರು.
ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಹಂಡ್ಲಿ ವೇದಕುಮಾರ್, ಕಸಾಪ ಜಿಲ್ಲಾ ಕೋಶಾಧಿಕಾರಿ ಎಸ್.ಎ. ಮುರಳೀಧರ್, ಪ್ರಮುಖರಾದ ಕಾಂತರಾಜ್, ಸೋಮಪ್ಪ, ಪ್ರೇಮ್‍ಕುಮಾರ್, ಸುನೀತಾ, ಪ್ರಾಂಶುಪಾಲೆ ಭಾರತಿ, ಅಬ್ದುಲ್ ರಬ್ ಅವರುಗಳು ಉಪಸ್ಥಿತರಿದ್ದರು.