ಮಡಿಕೇರಿ, ಜು. 25: ಸಾಕಷ್ಟು ಕುತೂಹಲ ಕೆರಳಿಸಿದ್ದ ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಚುನಾವಣೆಯಲ್ಲಿ ಪೊನ್ನಣ್ಣ. ಕೆ.ಸಿ. ಅದೃಷ್ಟ ಪರೀಕ್ಷೆಯ ಮುಖಾಂತರ ಗೆಲುವು ಸಾಧಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಿಂದ ಆಯ್ಕೆಯಾಗುತ್ತಿರುವ ಮೊದಲ ವಿದ್ಯಾರ್ಥಿ ನಾಯಕ ಇವರಾಗಿದ್ದು, ಹೆಚ್‍ಆರ್‍ಡಿ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಬುಧವಾರ ನಡೆದ ಚುನಾವಣೆ ಹಾಗೂ ಫಲಿತಾಂಶ ಪ್ರಕ್ರಿಯೆಯಲ್ಲಿ ಅಧ್ಯಕ್ಷಗಾದಿಗೆ ಅಲೆನ್ ಕೆ ಎ, (ವಾಣಿಜ್ಯ ವಿಭಾಗ) ಹರೀಶ್ ಆರ್ (ಹೆಚ್‍ಇಪಿ) ಹಾಗೂ ಪೊನ್ನಣ್ಣ. ಕೆ. ಸಿ (ಹೆಚ್‍ಆರ್‍ಡಿ) ಸ್ಪರ್ಧಿಸಿದ್ದು, ಈ ಪೈಕಿ ಹರೀಶ್ 20 ಮತ ಗಳಿಸಿದರೆ, ಅಲೆನ್ ಮತ್ತು ಪೊನ್ನಣ್ಣ ತಲಾ 21 ಮತಗಳಿಸಿ ಸಮನಾಂತರ ಸಾಧಿಸಿದ್ದರು. ಆರಂಭದಲ್ಲಿ ಸಮ್ಮಿಶ್ರ ಸರ್ಕಾರದಂತೆ ಎರಡು ಪ್ರತ್ಯೇಕ ಸೆಮಿಸ್ಟರ್‍ಗಳಿಗೆ ಅಧಿಕಾರ ಹಂಚಿಕೊಳ್ಳುವ ಅಭಿಪ್ರಾಯ ಮೂಡಿತ್ತಾದರೂ, ನಂತರ ಮೂಡಿಬಂದ ನಿರ್ಣಯದಂತೆ ಚೀಟಿ ಎತ್ತುವ ಮೂಲಕ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡಲಾಯಿತು. ಪ್ರಜಾಸತ್ತಾತ್ಮಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ವಿದ್ಯಾರ್ಥಿಗಳು ಇದಕ್ಕೆ ಪರಿಪೂರ್ಣವಾಗಿ ಸಹಕರಿಸಿದರು. ಚುನಾವಣೆಯಲ್ಲಿ ಎಲ್ಲಾ ತರಗತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾಲೇಜಿನ ಚುನಾವಣಾ ಆಯುಕ್ತೆ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ನೂತನ ಚುನಾಯಿತ ವಿದ್ಯಾರ್ಥಿ ನಾಯಕರನ್ನುದ್ದೇಶಿಸಿ ಮಾತನಾಡಿ, ಶಿಸ್ತನ್ನು ಕಾಪಾಡಿಕೊಂಡು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ನೂತನ ವಿದ್ಯಾರ್ಥಿ ಸಂಘ ಕೈಜೋಡಿಸಬೇಕು ಎಂದರು.
ಕಾಲೇಜಿನ ಚುನಾವಣಾ ಆಯೋಗದ ಸಂಯೋಜಕ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ತಿಪ್ಪೇಸ್ವಾಮಿ ಅವರು ಒಟ್ಟಾರೆ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರೆ, ಆಂಗ್ಲ ವಿಭಾಗದ ಮುಖ್ಯಸ್ಥ ಪೂಣಚ್ಚ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಹೆಗಡೆ, ಡಾ.ತಳವಾರ್, ವಿಜ್ಞಾನ ವಿಭಾಗದ ಗೀತಾಂಜಲಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಜಗದೀಶ್, ಸಮಾಜಶಾಸ್ತ್ರ ವಿಭಾಗದ ರಂಗಪ್ಪ, ಭೌತಶಾಸ್ತ್ರ ವಿಭಾಗದ ನಾಗರಾಜ್ ಹಾಗೂ ಇನ್ನಿತರ ಉಪನ್ಯಾಸಕರು ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ನೆರವಾದರು.
ನೂತನ ಪದಾಧಿಕಾರಿಗಳು
ವಿದ್ಯಾರ್ಥಿ ನಾಯಕ (ಅಧ್ಯಕ್ಷ) ಕೆ.ಸಿ. ಪೊನ್ನಣ್ಣ, ಉಪಾಧ್ಯಕ್ಷೆ ಗೌತಮಿ ಎಂ.ಎಸ್., ಕಾರ್ಯದರ್ಶಿ ಸಂಪ್ರೀತ್ ಬಿ.ಹೆಚ್., ಜಂಟಿ ಕಾರ್ಯದರ್ಶಿಗಳು ವಿನಯ್ ಮತ್ತು ಕಾವೇರಮ್ಮ, ಸಾಂಸ್ಕøತಿಕ ಕಾರ್ಯದರ್ಶಿಗಳು ರಾಯ್ಡನ್ ಮತ್ತು ಲಿಪಿಶ್ರೀ
-ವರದಿ: ಚರಣ್ ಜಿ. ಮತ್ತು ಅಶ್ವಿನಿ ಎಂ.ಎಂ.
(ದ್ವಿತೀಯ ಕೆ.ಜೆ.ಎಸ್.)