ಮಡಿಕೇರಿ, ಜು. 25: ಪತ್ರಕರ್ತೆ, ಗೌರಿಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಎಸ್‍ಐಟಿ ತಂಡವು ಕೊಡಗಿನ ಶಂಕಿತ ವ್ಯಕ್ತ್ತಿಯೋರ್ವನನ್ನು ವಶಕ್ಕೆ ಪಡೆದಿದೆ. ಪಾಲೂರು ನಿವಾಸಿ, ರಾಜೇಶ್ ಬಂಗೇರ (50) ಬಂಧಿತ ಆರೋಪಿ. ಈತ ಪ್ರಸಕ್ತ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಶರೀನ್ ಸುಬ್ಬಯ್ಯ ಅವರ ಆಪ್ತ ಸಹಾಯಕನಾಗಿಯೂ ಕೆಲಸ ಮಾಡಿದ್ದು, ರಾಜೇಶ್ ಬಂಗೇರ ಈ ಹಿಂದೆ ಶಿಕ್ಷಣ ಇಲಾಖೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಳಿಕ ಉಷಾ ದೇವಮ್ಮ ಅವರು ಜಿ.ಪಂ. ಉಪಾಧ್ಯಕ್ಷರಾಗಿದ್ದ ಸಂದರ್ಭ ಜಿಲ್ಲಾ ಪಂಚಾಯಿತಿಗೆ ನಿಯೋಜಿಸಲಾಗಿತ್ತು.‘ಶಕ್ತಿ’ಗೆ ತಿಳಿದು ಬಂದಂತೆ ರಾಜೇಶ್ ಬಂಗೇರ ಕಳೆದ ಕೆಲವು ವರ್ಷಗಳ ಹಿಂದೆ ಸನಾತನ ಹಿಂದೂ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರ್ಕಾರಿ ನೌಕರನಾದುದರಿಂದ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯಿಂದ ಹೊರ ಬಂದಿದ್ದು, ಜಿಲ್ಲೆಯಲ್ಲಿರುವ ಸನಾತನ ಸಂಸ್ಥೆಯ ಘಟಕದ ಕೆಲವು ಕಾರ್ಯಕರ್ತರ ಅನಿಸಿಕೆಯಂತೆ ಇತ್ತೀಚೆಗಿನ ವರ್ಷಗಳಲ್ಲಿ ರಾಜೇಶ್ ಸಂಸ್ಥೆಯ ಸಕ್ರಿಯ ಚಟುವಟಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಇತ್ತೀಚೆಗೆ ಗೌರಿ ಹತ್ಯೆ ಪ್ರಕರಣದಲ್ಲಿ ಗೋವಾ ಮೂಲದ ಸನಾತನ ಸಂಸ್ಥೆಯ ಪಾತ್ರದ ಕುರಿತು ಕೇಳಿ ಬಂದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಕಾರ್ಯಕರ್ತರು ಬಂಧಿತರಾಗಿದ್ದು, ವಿಚಾರಣೆ ನಡೆಯುತ್ತಿದೆ.
(ಮೊದಲ ಪುಟದಿಂದ) ಇದೀಗ ಕೊಡಗಿನ ಶಂಕಿತ ವ್ಯಕ್ತಿ ರಾಜೇಶ್ ಹೆಸರು ಸೇರ್ಪಡೆಗೊಂಡಿದೆ. ಒಂದು ವಾರದ ಹಿಂದೆಯೇ ಎಸ್‍ಐಟಿ ತನಿಖಾ ತಂಡವು ಕೊಡಗಿಗೂ ಆಗಮಿಸಿದ್ದು, ರಾಜೇಶ್‍ನನ್ನು ಬಂಧಿಸಿ ಕರೆದೊಯ್ದಿರುವದಾಗಿ ಮೂಲವೊಂದರಿಂದ ತಿಳಿದು ಬಂದಿದೆ. ಆದರೆ, ಅಧಿಕೃತ ವರದಿಯಂತೆ ತಾ. 23 ರಂದು ರಾಜೇಶ್‍ನನ್ನು ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರಾಜೇಶ್ ಪಾಲೂರುವಿನ ನಿವಾಸಿಯಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪತ್ನಿ ಗೃಹಿಣಿಯಾಗಿದ್ದು, ಇಬ್ಬರು ಪುತ್ರರು ಓದುತ್ತಿದ್ದಾರೆ.
ಇಂದು ‘ಶಕ್ತಿ’ ಪ್ರತಿನಿಧಿಗಳು ಪಾಲೂರುವಿನ ರಾಜೇಶ್ ಮನೆಗೆ ತೆರಳಿದಾಗ ಅಲ್ಲಿ ನೀರವ ಮೌನ ಆವರಿಸಿತ್ತು. ಪತ್ನಿ ಕವಿತಾ ಆತಂಕಗೊಂಡು ಮಡಿಕೇರಿಗೆ ತೆರಳಿದ್ದರು. ಅವರು ತನ್ನ ಪತಿ ರಾಜೇಶ್‍ನ ಬಂಧನವಾದ ಸಂದರ್ಭ ಬೆಂಗಳೂರಿನಲ್ಲಿದ್ದು, ಯಾವದೇ ಮಾಹಿತಿ ಅವರಿಗೆ ಲಭ್ಯವಾಗಿರಲಿಲ್ಲವೆನ್ನಲಾಗಿದೆ. ತನ್ನ ಪತಿಯ ಬಂಧನದ ವಿಚಾರವೂ ಅವರಿಗೆ ಗೊತ್ತಾಗಲಿಲ್ಲ ಎನ್ನಲಾಗಿದ್ದು, ತಾ. 22ರ ಭಾನುವಾರ ಪಾಲೂರುವಿನ ಮನೆಗೆ ಬೆಂಗಳೂರಿನಿಂದ ಹಿಂತಿರುಗಿದಾಗಲಷ್ಟೆ ತನ್ನ ಪತಿ ಬಂಧಿತರಾಗಿದ್ದಾರೆ ಎನ್ನುವ ಮಾಹಿತಿ ಅವರಿಗೆ ಲಭ್ಯವಾಗಿದೆ.ಇದೀಗ ತನ್ನ ಪತಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲು ವಕೀಲರ ಮೂಲಕ ಅವರು ಶತಾಯಗತಾಯ ಪ್ರಯತ್ನಿಸುತ್ತಿರುವದು ‘ಶಕ್ತಿ’ಯ ಗಮನಕ್ಕೆ ಬಂದಿದೆ.
ಮಾಹಿತಿಯನ್ವಯ ಎಸ್‍ಐಟಿ ತಂಡ ಆರೋಪಿ ರಾಜೇಶ್‍ನನ್ನು ಆ. 6ರವರೆಗೆ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದೆ. ಗೌರಿ ಹತ್ಯೆ ಕೃತ್ಯಕ್ಕೆ ಸಂಚು ರೂಪಿಸಿದ ಹಂತಕರಿಗೆ ರಾಜೇಶ್ ನೆರವು ನೀಡಿರುವ ಶಂಕಿತ ಆರೋಪದ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿರುವದಾಗಿ ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ರಾಜೇಶ್ ಕಚೇರಿಗೆ ಗೈರು ಹಾಜರಾದ ಬಗ್ಗೆ ತನ್ನ ಗಮನಕ್ಕೆ ಬಂದಿದೆ ಎಂದು ಎಂಎಲ್‍ಸಿ ವೀಣಾ ಅಚ್ಚಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ. ತನ್ನ ಕಚೇರಿಯಲ್ಲಿ ಆ ವ್ಯಕ್ತಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದುದಷ್ಟೆ ತನ್ನ ಗಮನಕ್ಕೆ ಬಂದಿದೆ ಹೊರತು ಆತನ ಇತರ ಚಟುವಟಿಕೆಗಳ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ವೀಣಾ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿಯಿಂದ ಈತನನ್ನು ತನ್ನ ಆಪ್ತ ಸಹಾಯಕನಾಗಿ ನಿಯೋಜಿಸಲಾಗಿತ್ತು. ಇದೀಗ ತಾನು ಬೇರೊಬ್ಬ ಆಪ್ತ ಸಹಾಯಕನನ್ನು ನಿಯೋಜಿಸುವಂತೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯುವದಾಗಿ ಅವರು ತಿಳಿಸಿದ್ದಾರೆ.