ವೀರಾಜಪೇಟೆ, ಜು. 26: ವೀರಾಜಪೇಟೆಯ ಕಡಂಗಮರೂರಿನಲ್ಲಿ ಪಣಿ ಎರವರ ಎಲ್. ಮಣಿ ಎಂಬಾತ ತನ್ನ ಪತ್ನಿ ಮುತ್ತಿಯನ್ನು ಬೆಂಕಿಯಿಂದ ಸುಟ್ಟು ಕೊಲೆ ಮಾಡಿದ ಆರೋಪಕ್ಕಾಗಿ ಇಲ್ಲಿನ ಅಧಿಕ ಮತ್ತು ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 2.9.2017 ರಂದು ರಾತ್ರಿ 11 ಗಂಟೆಗೆ ಕಡಂಗ ಮರೂರು ಗ್ರಾಮದ ಪಿ. ಸರಸ್ವತಿ ಎಂಬವರ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿ ಎರವರ ಮಣಿ ತನ್ನ ಪತ್ನಿಯೊಂದಿಗೆ ಜಗಳ ತೆಗೆದು ತಂದೆ ಮನೆಯಲ್ಲಿ ಆಸ್ತಿ ಪಾಲು ಕೇಳುವಂತೆ ಪತ್ನಿಗೆ ಕಿರುಕುಳ ನೀಡಿದನ್ನು ವಿರೋಧಿಸಿದ ಮುತ್ತಿಯ ಶರೀರ, ತಲೆ ಕೈಕಾಲು ಭಾಗಗಳಿಗೆ ಧಾರುಣವಾಗಿ ಬೆಂಕಿಯಿಂದ ಸುಟ್ಟಿದ್ದರಿಂದ ಅಂದು ರಾತ್ರಿಯೇ ಮುತ್ತಿ ಸಾವನ್ನಪ್ಪಿದಳೆಂದು ಇಲ್ಲಿನ ಗ್ರಾಮಾಂತರ ಪೊಲೀಸರು ಆರೋಪಿಸಿ ಕೊಲೆ ಪ್ರಕರಣ ದಾಖಲಿಸಿ ಮಣಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.

ವೀರಾಜಪೇಟೆ ವೃತ್ತದ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಮಾ ಅವರು ಇಂದು ಕಠಿಣ ಜೀವಾವಧಿ ಶಿಕ್ಷೆ, ರೂ. 30,000 ದಂಡ-ದಂಡ ಪಾವತಿಸಲು ತಪ್ಪಿದರೆ ಎರಡು ವರ್ಷಗಳ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.