ನಾಪೆÇೀಕ್ಲು, ಜು. 26: ಸುತ್ತಲು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಹರಿಯುವ ಹೊಳೆಯುವ ಸುಂದರ ಮನಮೋಹಕ ದೃಶ್ಯ. ಒಟ್ಟಿನಲ್ಲಿ ಹೇಳುವದಾದರೆ ಇದೊಂದು ಪ್ರಕೃತಿ ನಿರ್ಮಿತ ಸ್ವರ್ಗ. ಆದರೆ, ಇದರ ಸಮೀಪದಲ್ಲಿಯೇ ವಾಸಿಸುತ್ತಿರುವವರ ಬದುಕು ಮಾತ್ರ ನರಕ. ಇವರ ಬಗ್ಗೆ ಕೇಳುವವರೇ ಇಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಇದು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಾಟ್ ಕಾಲೋನಿಯ ಒಂದು ನೋಟ.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಕಾಲೋನಿಗೆ ಬಲ್ಲಮಾವಟಿ ಮುಖ್ಯ ರಸ್ತೆಯಿಂದ 8 ಕಿ.ಮೀ. ಬೆಟ್ಟದತ್ತ ಕ್ರಮಿಸಬೇಕಾಗುತ್ತದೆ. ಮೊದಲಿಗೆ ಡಾಮರು ರಸ್ತೆ. ಕೆಲವೆಡೆಗಳಲ್ಲಿ ಹಿಂದೆ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಅವರ ವಿಶೇಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಮತ್ತು ಕಳೆದ ವರ್ಷ ನಿರ್ಮಿಸಿದ 1 ಕಿ.ಮೀ. ಡಾಮರು ರಸ್ತೆ ಹೊರತು ಪಡಿಸಿದರೆ, ನಂತರದ್ದು ಕಡಿದಾದ ಕೊರಕು ಕಲ್ಲಿನ ತೀರಾ ಕಚ್ಚಾ ರಸ್ತೆ. ಇದರಲ್ಲಿ ನಡೆದಾಡಲೂ ಸಾಧ್ಯವಿಲ್ಲ.

ವಾಹನ ಚಾಲನೆ ದುಸ್ಸಾಹಸವೇ ಸರಿ. ರಸ್ತೆ ಮಧ್ಯದಲ್ಲಿ ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ತೊರೆಗಳು. ಮಳೆಗಾಲದಲ್ಲಿ ಇವುಗಳನ್ನು ದಾಟುವದು ಸಾಹಸವೇ ಸರಿ. ಈ ರಸ್ತೆಗಾಗಿಯೇ ವಿದ್ಯಾರ್ಥಿಗಳು, ಜನರು ಸಾಗಬೇಕಾದ ಪರಿಸ್ಥಿತಿ. ಇಲ್ಲಿ ಮೋರಿ ನಿರ್ಮಿಸದಿದ್ದರೆ ಅಪಾಯ ಖಂಡಿತ. ರಸ್ತೆ ಮಧ್ಯದಲ್ಲಿ ಸಿಗುವ ಹೊಳೆಯೊಂದಕ್ಕೆ ಹಿಂದೆ ನಿರ್ಮಿಸಿದ ಕಾಲು ಸೇತುವೆಯೊಂದಿದ್ದು, ಜನ ಇದರ ಮೇಲೇರಿ ಮಧ್ಯಕ್ಕೆ ತಲಪಿದಂತೆ ಅಲುಗಾಡುವ ಇದು, ಜನರಿಗೆ ಭೀತಿ ಹುಟ್ಟಿಸುತ್ತದೆ. ಇದರಿಂದ ನೀರಿಗಿಳಿದು ಸಂಚರಿಸಬೇಕಾದ ಅಪಾಯದ ಪರಿಸ್ಥಿತಿ ಎದುರಾಗಿದೆ. ಇದು ಮಳೆ ನೀರಿಗೆ ಕೊಚ್ಚಿ ಹೋದರೆ ಇವರು ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡಂತೆಯೇ. ಇಲ್ಲಿ ಕೂಡಲೇ ಸೇತುವೆ ನಿರ್ಮಿಸಿ ಈ ಸಮಸ್ಯೆಯನ್ನು ನಿವಾರಿಸಬೇಕೆಂಬದು ಕಾಲೋನಿ ಜನರ ಅಳಲು.

ಇತ್ತೀಚೆಗೆ ಗ್ರಾಮದ ಯುವಕರು ಹೊಂಡಗಳಿಗೆ ಕಲ್ಲು ತುಂಬಿಸುವದರ ಮೂಲಕ ರಸ್ತೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿದ್ದಾರೆ. ಸಮೀಪದಲ್ಲೇ ಬೆಳ್ಳೇರಿ ಹೊಳೆ ಹರಿಯುತ್ತಿದ್ದು, ಸುತ್ತಲೂ ಜಲಮೂಲಗಳಿಂದಾಗಿ ಹೊಂಡಗುಂಡಿಗಳಲ್ಲಿಯೇ ಗ್ರಾಮಸ್ಥರು ಸಂಚರಿಸುವ ಅನಿವಾರ್ಯತೆ ತಲೆದೋರಿದೆ. - ಪಿ.ವಿ. ಪ್ರಭಾಕರ್