ಮಡಿಕೇರಿ, ಜು. 25: ಅದು ಭಾರತದ ತುತ್ತತುದಿ...ನೀರು ಕೂಡ ತಕ್ಷಣವೇ ಹಿಮಗಡ್ಡೆಯಾಗಿ ಪರಿವರ್ತನೆಯಾಗುವ ಸ್ಥಳವಿದು. ಈ ಪ್ರದೇಶದ ವ್ಯಾಪ್ತಿಯಲ್ಲಿ ಢಂ... ಡಮಾರ್ ಎಂಬ ಶಬ್ಧ ಬೆಂಕಿಯ ಕಿಡಿಗಳ ದರ್ಶನ ನಿರಂತರವಾಗಿತ್ತು. ಆದರೆ ಇಣದು ದೀಪಾವಳಿಯ ಸಂಭ್ರಮವಾಗಿರಲಿಲ್ಲ. ಪಟಾಕಿಯೂ ಅಲ್ಲ ಬಾಂಬ್‍ಗಳ ಸ್ಪೋಟವಾಗಿತ್ತು. ಇಡೀ ದೇಶವನ್ನು ಆತಂಕಕ್ಕೆ ತಳ್ಳಿದ್ದ ಯುದ್ಧವಿದು. ಅದೆಷ್ಟೊ ಸಾವು - ನೋವುಗಲು- ಎಲ್ಲೆಲ್ಲೂ ಹೆಪ್ಪುಗಟ್ಟಿದ ಆತಂಕ ಕಿವಿಗಡಚ್ಚಿಕ್ಕುವ ವಿಮಾನಗಳ ಭೋರ್ಗೆರೆತ ದೇಶಕ್ಕೆ ನಿರೀಕ್ಷೆ ಮಾಡದ ರೀತಿಯಲ್ಲಿ ಎದುರಾಗಿದ್ದ ಆಘಾತವಾಗಿತ್ತು. ಶತ್ರುಗಳು ನಮ್ಮ ತಾಯಿನಾಡಿನ ನೆಲವನ್ನು ಕಬಳಿಸಲು ನಡೆಸಿದ್ದ ಪ್ರಯತ್ನವೊಂದು ಇದಾಗಿತ್ತು. ಆಯಕಟ್ಟಿನ ಜಾಗದಲ್ಲಿ ಸೇರಿಕೊಂಡು ದೇಶದ ನೆಲವನ್ನು ಅತಿಕ್ರಮಿಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದವರನ್ನು ಭಾರತಾಂಬೆಯ ಸುಪುತ್ರರು ಬಿಡಲಿಲ್ಲ. ಎಲ್ಲವನ್ನೂ ಮರೆತು ದೇಶಕ್ಕಾಗಿ ಮಾತ್ರ ತಾನು ಎಂಬಂತೆ ಕೆಚ್ಚೆದೆಯಿಂದ ಹೋರಾಡಿದ ಫಲವಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು ಭಾರತಾಂಬೆಯನ್ನು ಧನ್ಯಳಾಗಿ ಮಾಡಿದ್ದರು. ಸುಮಾರು 537ರಷ್ಟು ಮಂದಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಹಲವು ದಿನಗಳ ಹೋರಾಟಕ್ಕೆ 1500 ಕೋಟಿಗಳಷ್ಟು ಹಣ ವ್ಯಯದೊಂದಿಗೆ ಅಪಾರ ಹಾನಿಯ ನಡುವೆಯೂ ಭಾರತ ದೇಶ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿತು. ತಾಯ್ನಾಡನ್ನು ರಕ್ಷಿಸಿಕೊಳ್ಳಲು ಅನ್ನ ಆಹಾರ ನಿದ್ರೆ, ಕುಟುಂಬದ ನೆನಪು ಬಿಟ್ಟು ಹೋರಾಡಿದ ನಮ್ಮೀ ಹೆಮ್ಮೆಯ ಸೈನಿಕರ ಪರಿಶ್ರಮದ ಫಲವಾಗಿ ಜುಲೈ 26ರಂದು ಇಡೀ ದೇಶದೆಲ್ಲೆಡೆ ವಿಜಯೋತ್ಸವವೊಂದು ಆಚರಿಸಲ್ಪ ಡುತ್ತದೆ. ಇದೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಯಶೋಗಾಥೆ.

‘‘ಗುಡಿಯಲ್ಲಿರುವವನಿಗಿಂತ ಗಡಿಯಲ್ಲಿ ಇರುವವನು ಶ್ರೇಷ್ಠ’’ ಎಂಬ ಮಾತೊಂದಿದೆ. ಗುಡಿಯಲ್ಲಿ ದೇವರಿದ್ದರೆ ಗಡಿಯಲ್ಲಿ ಸೈನಿಕರಿರುತ್ತಾರೆ.

ಆ ಅರುವತ್ತು ದಿನಗಳ ನೆನಪು : ಭಾರತದ ತುದಿ ಶ್ರೀನಗರದಿಂದಲೇ ಹೆದ್ದಾರಿಯಲ್ಲಿ ಬರುವ ಕಾರ್ಗಿಲ್ ವಿಶ್ವದಲ್ಲಿ ಅತಿ ಹೆಚ್ಚು ಚಳಿಯ ಜಾಗ - ಈ ಪ್ರದೇಶವನ್ನು ಪೂರ್ವ ನಿಯೋಜಿತ ಪ್ರಯತ್ನದಂತೆ ಪಾಕಿಸ್ತಾನ ಬೆಂಬಲಿತ ಅತಿಕ್ರಮಣಕಾರರು ಆಕ್ರಮಿಸಿಕೊಂಡು ಭಾರತದ ಮೇಲೆ ಅಟ್ಟಹಾಸ ಮೆರೆದರು. 1999ರ ಮೇ 26 ರಿಂದ ಅತಿಕ್ರಮಣಕಾರರ ಮೇಲೆ ಭಾರತ ಧಾಳಿ ಆರಂಭಿಸಿತು. ಬೇಹುಗಾರಿಕೆಯ ವರದಿಯ ಪ್ರಕಾರ 160ಕ್ಕೂ ಹೆಚ್ಚು ಅತಿಕ್ರಮಣಕಾರರನ್ನು ಸದೆಬಡಿಯುವದರೊಂದಿಗೆ ಆರಂಭದಲ್ಲೇ ಭಾರತೀಯ ಸೇವೆಯ 17 ಯೋಧರು ವೀರಮರಣ ವನ್ನಪ್ಪಿದ್ದರು.

ಪಾಕ್‍ನ ಕ್ಷಿಪಣಿ ಧಾಳಿಗೆ ಭಾರತದ ಹೆಲಿಕಾಫ್ಟರ್‍ಗಳು- ಯುದ್ಧ ವಿಮಾನಗಳು ನಾಶವಾಗಿ ಇನ್ನಷ್ಟು ಮಂದಿ ಯೋಧರ ಪ್ರಾಣ ಪ್ರಕೃತಿಯಲ್ಲಿ ವಿಲೀನವಾಯಿತು. ಆದರೂ, ಕೆಲವು ಮಹತ್ವದ ನೆಲೆಗಳನ್ನು ಭಾರತ ಮರು ವಶಪಡಿಸಿಕೊಂಡಿತು. ಆಗಿನ ಪ್ರಧಾನಿ ಎ.ಬಿ. ವಾಜಪೇಯಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ದಿಟ್ಟ ನಿಲುವು ಕೈಗೊಂಡು. ಅತಿಕ್ರಮಿಗಳಿಗೆ ದಿಟ್ಟ ಉತ್ತರ ನೀಡಲಾರಂಭಿಸಿದ ಭಾರತದ ಅದೆಷ್ಟೋ ಸೇನಾಧಿಕಾರಿ ಗಳು, ಸೈನಿಕರು ಹುತಾತ್ಮರಾದರು. ‘‘ಆಪರೇಷನ್ ವಿಜಯ್’’ ಹೆಸರಿನ ಈ ಕಾರ್ಗಿಲ್ ಕಾರ್ಯಾಚರಣೆ ಸಂದರ್ಭ ದೇಶಕ್ಕೆ ದೇಶವೆ ಒಂದಾಯಿತು. ಜಾತಿ - ಮತ - ಧರ್ಮ ಬದಿಗೊತ್ತಿ ದೇಶಪ್ರೇಮ ಮೆರೆದ ಭಾರತೀಯರು ಸೈನಿಕರ ಬೆಂಬಲಕ್ಕೆ ನಿಂತರು. ಲಕ್ಷಾಂತರವಲ್ಲ... ಕೋಟಿ ಕೋಟಿ ಹಣಗಳು ಸಂಗ್ರಹವಾಗ ತೊಡಗಿದವು. ಆದರೂ ಮುಂಚೂಣಿಯಲ್ಲಿದ್ದವರು ಹೆಮ್ಮೆಯ ಸೈನಿಕರಲ್ಲವೇ ಎಂಬದು ಸ್ತುತ್ಯಾರ್ಹ.

ಕೊಡಗಿನವರೂ ಹುತಾತ್ಮರಾದರು : ಕಾರ್ಗಿಲ್ ಯುದ್ಧ ಸುಮಾರು 60 ದಿನಗಳ ಕಾಲ ನಡೆದಿರುವದು ಇತಿಹಾಸವಾಗಿದೆ. ಕಾರ್ಯಾಚರಣೆ ಯಲ್ಲಿ ಸೈನಿಕರ ನಾಡೆಂದು ಹೆಸರು ಪಡೆದಿರುವ ಕೊಡಗು ಜಿಲ್ಲೆಯ ಹಲವರೂ ಸೈನಿಕರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಜೂನ್ 1ರಂದು ಕೊಡಗಿನ ಯೋಧ ಐಗೂರಿನ ಸಿಂಗೂರು ಮೇದಪ್ಪ ಅವರು ವೀರಮರಣವನ್ನಪ್ಪಿದ್ದರು. ಭಾರೀ ಕದನ ಮುಂದುವರಿದೇ ಇತ್ತು. ದೇಶದ ಹಲವಷ್ಟು ವೀರಸೇನಾನಿಗಳು ಈ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ. ತ್ರಾಸದಾಯಕ ಹೋರಾಟದ ನಡುವೆಯೂ ಭಾರತೀಯ ಸೇನೆ ತನ್ನ ನೆಲೆಗಳನ್ನು ಮರು ವಶಪಡಿಸಿಕೊಳ್ಳುತ್ತಾ ಸಾಗಿತ್ತು. ಈ ನಡುವೆ ಜುಲೈ 7ರಂದು ಕೊಡಗಿನ ಇನ್ನಿಬ್ಬರು ಯೋಧರು ವೀರಮರಣವನ್ನಪ್ಪಿದ್ದರು. ಮೈತಾಡಿಯ ಪೆಮ್ಮಂಡ ಕಾವೇರಪ್ಪ ಹಾಗೂ ಮೂಲತಃ ಪಾಲಿಬೆಟ್ಟದವರಾಗಿದ್ದರು. ಹಾಸನದಲ್ಲಿದ್ದ ಯೋಧ ವೆಂಕಟ ಅವರ ಬಲಿದಾನವಾಗಿತ್ತು.

ಕಾರ್ಗಿಲ್ ಕಾರ್ಯಾಚರಣೆಯ ಸಂದರ್ಭ ಗಡಿ ಪಹರೆಯಲ್ಲಿ ನಿರತರಾಗಿದ್ದ ಮೈತಾಡಿ ಗ್ರಾಮದವರಾದ ವಿ.ಎಲ್. ಗಣೇಶ್ ಅವರು ವಿಷ ಜಂತುವೊಂದು ಕಚ್ಚಿದ ಪರಿಣಾಮ ಈ ಕರ್ತವ್ಯದ ನಡುವೆ ಪ್ರಾಣತ್ಯಾಗ ಮಾಡಿದ್ದರು.

ಕೊಡಗಿನ ಈ ನಾಲ್ವರೊಂದಿಗೆ ದೇಶದ ಸಾಕಷ್ಟು ಮಂದಿ ಹುತಾತ್ಮರಾಗಿದ್ದರು. ಅದೆಷ್ಟೋ ಮಂದಿ ಗಾಯಗೊಂಡಿದ್ದರು. ಭಾರತದ ನಿಲುವು ಹಾಗೂ ಪಾರದರ್ಶಕತೆಗೆ ವಿಶ್ವದಾದ್ಯಂತ ಮನ್ನಣೆ ದೊರೆತಿತ್ತು. ಬೃಹತ್ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿದ್ದವು. ಇದರೊಂದಿಗೆ ದೇಶದ ಸೈನಿಕರ ಕೆಚ್ಚೆದೆಯ ಹೋರಾಟದ ಫಲವಾಗಿ ಸೈನ್ಯದ ಮನೋಸ್ಥೈರ್ಯ ಹೆಚ್ಚಾಗಿತ್ತಲ್ಲದೆ, ಶತ್ರು ಸೈನ್ಯ ಕುಗ್ಗಿದ ಮನೋಭಾವನೆಯೊಂದಿಗೆ ಪಲಾಯನಗೈದಿತ್ತು. ಪಾಕಿಸ್ತಾನದ ಸೇನೆ ಹಾಗೂ ಉಗ್ರಗಾಮಿಗಳಿಂದ ಅತಿಕ್ರಮಣ ಗೊಂಡಿದ್ದ ಪ್ರದೇಶ ಗಳೆಲ್ಲವನ್ನೂ ಭಾರತ ಮರು ಸ್ವಾಧೀನಪಡಿಸಿ ಕೊಂಡಿತ್ತು. ಈ ಅವಿಸ್ಮರಣೀಯ ಕದನದ ಯಶಸ್ಸಿನ ಪ್ರತೀಕವಾಗಿ ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

- ಕಾಯಪಂಡ ಶಶಿ ಸೋಮಯ್ಯ