ಮಡಿಕೇರಿ, ಜು. 25: 2017ರ ಮೇ 4 ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂ ಪರಿವರ್ತನೆ ಕಡ್ಡಾಯ ಎಂದು ಸೂಚಿಸಿರುವದರಿಂದ ಮಡಿಕೇರಿಯಲ್ಲಿ ಹೊಸಮನೆ ಹಾಗೂ ಹಳೆಮನೆ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ; ಈ ಕಾರಣದಿಂದ ಅಂದಿನ ಆದೇಶವನ್ನು ಕೈ ಬಿಡಬೇಕೆಂದು ನಗರಸಭೆ ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸಿದೆ.
ಇತ್ತೀಚೆಗೆ ಹೆಚ್.ಡಿ. ಕುಮಾರಸ್ವಾಮಿಯವರು ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮನವಿ ಸಲ್ಲಿಸಿದ್ದು, ಮಡಿಕೇರಿ ನಗರಸಭೆಯ ಶೇ. 90 ರಷ್ಟು ಖಾತೆಗಳು ಮುನ್ಸಿಪಲ್ ಸರ್ವೆ ನಂಬರ್‍ಗಳಲ್ಲಿ ನಿರ್ವಹಣೆ ಆಗುತ್ತಿವೆ. ಸದರಿ ಸುತ್ತೋಲೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಸಾಧ್ಯವಾಗದ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲೂ ತೀರ್ಮಾನ ಮಾಡಿದ್ದು, ಆದೇಶವನ್ನು ಕೈ ಬಿಡುವಂತೆ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ಕಾರಣದಿಂದ ಅಂದಿನ ಸುತ್ತೋಲೆಯನ್ನು ಕೈ ಬಿಡುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಪೌರ ಕಾರ್ಮಿಕರ ಕೊರತೆ
ಜನಸಂಖ್ಯಾ ಆದಾರದ ಮೇಲೆ ಪೌರಕಾರ್ಮಿಕರ ನೇಮಕಾತಿ ಮಾಡಬೇಕೆಂಬ ಇತ್ತೀಚಿನ ಸರ್ಕಾರದ ಆದೇಶವನ್ನು ಕೈ ಬಿಟ್ಟು ಇಲ್ಲಿನ ಹವಾಮಾನ ಪರಿಸ್ಥಿತಿಗನುಗುಣವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ನಗರಸಭೆ ಪರವಾಗಿ ಅಧ್ಯಕ್ಷರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
2017ರಲ್ಲಿ 33912 ಜನಸಂಖ್ಯೆ ಹೊಂದಿರುವ ಮಡಿಕೇರಿ 17.04 ಚ.ಕಿ.ಮೀ. ವಿಸ್ತೀರ್ಣವಿದ್ದು, 8851 ಕಟ್ಟಡಗಳು ಇವೆ. ಸಂಪೂರ್ಣ ಗುಡ್ಡಗಾಡು ಪ್ರದೇಶವಾದ ಮಡಿಕೇರಿಯಲ್ಲಿ ಚರಂಡಿ, ಮಣ್ಣು ದಿಬ್ಬ, ಕಚ್ಚಡ ಕಡಿಯುವ ಕೆಲಸಗಳನ್ನು ಪೌರಕಾರ್ಮಿಕರು ನಿರ್ವಹಿಸಬೇಕಾಗಿದೆ. ದಿನನಿತ್ಯದ ಕಸ ಸಂಗ್ರಹಣೆ ಈ ಹಿಂದೆ 10 ಟನ್ ಇದ್ದು, ಪ್ರವಾಸಿಗರ ಸಂಖ್ಯೆಯಿಂದಾಗಿ ಸುಮಾರು 28 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇವುಗಳ ನಿರ್ವಹಣೆಗಳಿಗೆ ಜನಸಂಖ್ಯೆ ಆಧಾರದ ಮೇಲೆ ನೈರ್ಮಲ್ಯ ವಿಭಾಗದಲ್ಲಿ ಕೇವಲ 51 ಮಂದಿ ನೌಕರರ ನೇಮಕಾತಿ ಆಗಿದ್ದು, ಇದರಿಂದ ಪೂರ್ಣ ನಿರ್ವಹಣೆ ಸಾಧ್ಯವಾಗುತ್ತಿಲ್ಲವೆಂದು ಮನವಿಯಲ್ಲಿ ವಿವರಿಸಲಾಗಿದೆ.
ಶುಚಿತ್ವ ಹಾಗೂ ನೈರ್ಮಲ್ಯ ನಿರ್ವಹಣೆಗೆ ಈ ಹಿಂದೆ 100 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಹೊಸ ಆದೇಶದಿಂದ 51ಕ್ಕೆ ಇಳಿಸಿದ್ದು, ಆದೇಶವನ್ನು ಮಾರ್ಪಡಿಸಿ ಮಡಿಕೇರಿಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚು ನೌಕರರ ನೇಮಕಾತಿಗೆ ಅವಕಾಶ ಕಲ್ಪಿಸಬೇಕೆಂದು ಕೋರಲಾಗಿದೆ.
ಹೆಚ್ಚುವರಿ ಅನುದಾನ
ಮಡಿಕೇರಿ ನಗರದಲ್ಲಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆಯು ನಗರಸಭೆಯಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಈಗಿರುವ ಕಲಾಕ್ಷೇತ್ರವನ್ನು ಕೆಡವಿ ಆಧುನಿಕ ಶೈಲಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಕಲಾ ಮಂದಿರಕ್ಕೆ 8 ಕೋಟಿ, ಶಾಶ್ವತ ಪಾರ್ಕಿಂಗ್‍ಗೆ ನಗರದ ಗಾಂಧಿ ಮೈದಾನದ ಬದಿಯ ಮೇಲ್ಭಾಗದ ಪ್ರದೇಶದಲ್ಲಿ 3 ಎಕರೆ ಜಾಗದಲ್ಲಿ ಬಹುಮಹಡಿಯ ವಾಹನ ಪಾರ್ಕಿಂಗ್ ವ್ಯವಸ್ಥೆಗೆ 5 ಕೋಟಿ, ನೂತನ ಬಸ್ ನಿಲ್ದಾಣ ಕಾರ್ಯರೂಪಕ್ಕೆ ಬರಲು ಮುತ್ತಣ್ಣ ಸರ್ಕಲ್‍ನಿಂದ ರಾಜಾಸೀಟ್ ರಸ್ತೆಯ ಒಂದು ಬದಿಗೆ ತಡೆಗೋಡೆ, ಸೇತುವೆಗಳ ಅಗಲೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 75 ಕೋಟಿ, ಇತರ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 20 ಕೋಟಿ, ನಗರದ ಬೆಟ್ಟಗುಡ್ಡಗಳ ಮೇಲೆ ಮನೆ ನಿರ್ಮಿಸಿಕೊಂಡವರ ರಕ್ಷಣೆಗೆ ತಡೆಗೋಡೆ ನಿರ್ಮಾಣಕ್ಕೆ 25 ಕೋಟಿ ಹೀಗೆ ಒಟ್ಟು 133 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ನಗರಸಭೆಯ ಪರವಾಗಿ ಬೇಡಿಕೆ ಮುಂದಿಡಲಾಗಿದೆ.