ಮಡಿಕೇರಿ, ಜು. 25: ಮಡಿಕೇರಿ ದಸರಾ ಬೈಲಾ ತಿದ್ದುಪಡಿಯ ಅಗತ್ಯವಿದ್ದು, ತಾ. 26 ರಂದು (ಇಂದು) ನಡೆಯುವ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲಾ ಸದಸ್ಯರ ಗಮನ ಸೆಳೆಯುವದಾಗಿ ದಸರಾ ಸಮಿತಿಯ ಅಧ್ಯಕ್ಷೆ ಹಾಗೂ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಆಗಮಿಸಿದ ಸಂದರ್ಭ ದಸರಾ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಸರಾ ಬೈಲಾ ತಿದ್ದುಪಡಿಗೆ ಹಲವು ಬಾರಿ ಪ್ರಯತ್ನಿಸಿದ್ದರೂ ಅನೇಕ ವಿಘ್ನಗಳು ಕಂಡು ಬಂದು ಇದುವರೆಗೂ ಸಾಧ್ಯವಾಗಿಲ್ಲ. ಎಲ್ಲಾ ದೃಷ್ಟಿಯಿಂದಲೂ ಬದಲಾವಣೆ ಅಗತ್ಯವಿದೆ. ಮೊದಲು ನಗರಸಭಾ ಸದಸ್ಯರುಗಳ ವಿಶ್ವಾಸ ಪಡೆಯುವದಾಗಿ ಅಧ್ಯಕ್ಷರು ತಿಳಿಸಿದ್ದು, ನಂತರ ಕರೆಯುವ ಬಗ್ಗೆ ತೀರ್ಮಾನಿಸಲಾಗುತ್ತೆಂದು ಹೇಳಿದರು. ಈ ಹಿಂದೆ ಸರಕಾರದ ಅನುದಾನವಿಲ್ಲದೆ ದೇಣಿಗೆ ಸ್ವೀಕರಿಸಿ ದಸರಾ ಆಚರಿಸುತ್ತಿದ್ದ ಸಂದರ್ಭ ಎಲ್ಲರ ಸಹಕಾರ ಹಾಗೂ ದಸರಾದಲ್ಲಿ ಸಂಭ್ರಮವಿರುತ್ತಿತ್ತು. ಆದರೆ ಇದೀಗ ಎಲ್ಲದಕ್ಕೂ ಪೈಪೋಟಿ ಬಂದಿದ್ದು, ಭಿನ್ನಾಭಿಪ್ರಾಯಗಳಿಂದಾಗಿ ಹಿಂದಿನಷ್ಟೆ ಸುಸೂತ್ರವಾಗಿ ನಡೆಯುತ್ತಿಲ್ಲ ಎಂದು ವಿಷಾದಿಸಿದ ಅವರು, ಕಾರ್ಯಾಧ್ಯಕ್ಷ ಸ್ಥಾನಕ್ಕೂ ಮತದಾನದ ಚುನಾವಣೆ ನಡೆಯುತ್ತಿದ್ದು, ಎಲ್ಲವೂ ಸರಾಗವಾಗಿ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ದಸರಾ ಲೆಕ್ಕಪತ್ರ

ಹಲವರ ಅಸಹಕಾರದಿಂದಾಗಿ ಕಳೆದ ಸಾಲಿನ ದಸರಾ ಲೆಕ್ಕ ಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಾಗಲಿಲ್ಲ. ಇದೀಗ ಎಲ್ಲರಿಂದ ವಿವರ ಪಡೆದಿದ್ದು,ತಾ. 27 ರಂದು ಆಡಿಟ್‍ಗೆ ನೀಡಲಾಗುವದೆಂದು ಅಧ್ಯಕ್ಷ ವಿವರಿಸಿದರು. ಕಳೆದ ಬಾರಿ ಸುಮಾರು 9 ಲಕ್ಷ ರೂ. ಪಾವತಿಗೆ ಬಾಕಿ ಇದ್ದು, ಈ ಬಾರಿಯ ಅನುದಾನದಲ್ಲಿ ಮೊದಲು ಹಳೆಯ ಬಾಕಿಯನ್ನು ತೀರಿಸಿ ನಂತರ ಈ ಬಾರಿಯ ದಸರಾದ ಕಾರ್ಯಕ್ರಮಗಳನ್ನು ರೂಪಿಸಲಾಗುವದೆಂದು ಮಾಹಿತಿಯಿತ್ತರು.

ಮನವಿ

ಇತ್ತೀಚೆಗೆ ಜಿಲ್ಲೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಭೇಟಿ ನೀಡಿದ್ದ ಸಂದರ್ಭ ಮಡಿಕೇರಿ ದಸರಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದ್ದು, 2.24 ಕೋಟಿ ರೂ.ಗಳ ಅನುದಾನ ನೀಡುವಂತೆ ಸಮಿತಿ ಮನವಿ ಮಾಡಿದೆ. ಅಕ್ಟೋಬರ್ 9 ರಿಂದ 18ರವರೆಗೆ ಈ ಬಾರಿಯ ನವರಾತ್ರಿ ಕಾರ್ಯಕ್ರಮಗಳು ನಡೆಯಲಿದ್ದು, ಅಂದಾಜು ವೆಚ್ಚ 2.24 ಕೋಟಿ ಆಗಲಿದೆ ಎಂದು ವಿವರಿಸಲಾಗಿದೆ.