ಮಡಿಕೇರಿ, ಜು. 25: ಕಳೆದ ಮಾರ್ಚ್ ತಿಂಗಳಲ್ಲಿ ವಿದೇಶಿ ವಹಿವಾಟು ಇಲಾಖೆಯ ಡೈರೆಕ್ಟರ್ ಜನರಲ್ ಅವರು ಆಮದು ಮಾಡಿ ಕೊಳ್ಳುವ ಕರಿಮೆಣಸಿನ ಮೇಲೆ ಕೆ.ಜಿ. 1ಕ್ಕೆ ರೂ. 500ರ ಕನಿಷ್ಟ ಆಮದು ದರ ವಿಧಿಸಿರುವದಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಭಾರತೀಯ ಕಾಳು ಮೆಣಸಿಗೆ ದರ ಏರಿಕೆಯಾಗುವ ಕನಸು ಭಗ್ನವಾಗಿದ್ದು, ಮತ್ತೆ ಕಾನೂನಿನ ಹೋರಾಟ ನಡೆಸಬೇಕಾಗಿದೆ.ಭಾರತೀಯ ಕಾಳುಮೆಣಸಿಗೆ ದರ ತೀವ್ರ ಕುಸಿತ ಉಂಟಾದ ಪರಿಣಾಮ ಹಲವಷ್ಟು ಸಂಘ ಸಂಸ್ಥೆಗಳು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸರ್ಕಾರ ಕೆ.ಜಿ.ಯೊಂದಕ್ಕೆ ರೂ. 500ರ ಕನಿಷ್ಟ ಆಮದು ದರ ವಿಧಿಸಿ ಆದೇಶ ಹೊರಡಿಸಿತ್ತು. ಆದರೂ ಕಾನೂನಿನ ದುರ್ಬಳಕೆ ಮಾಡಿದ ಆಮದು ಮತ್ತು ರಫ್ತುದಾರರು ಶ್ರೀಲಂಕಾ ಮತ್ತು ವಿಯೆಟ್ನಾಂಗಳಿಂದ ಕಾಳುಮೆಣಸು ತರಿಸಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದರು ಹಾಗೂ ತಂದ ಮೌಲ್ಯಕ್ಕೆ ದಂಡ ಕಟ್ಟುತ್ತಿದ್ದರು. ಇದನ್ನು ಗಮನಿಸಿದ ಕಾಳುಮೆಣಸು ಸಮನ್ವಯ ಸಮಿತಿ ಪದಾಧಿಕಾರಿಗಳು ಮತ್ತೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶವನ್ನು ಬಯಸಿದರು.
(ಮೊದಲ ಪುಟದಿಂದ) ಸಮಸ್ಯೆಯ ಗಂಭೀರತೆ ಅರಿತ ಕೇಂದ್ರ ಸರ್ಕಾರ ವಿದೇಶಿ ವಹಿವಾಟು ಇಲಾಖೆಯ ಡೈರೆಕ್ಟರ್ ಜನರಲ್ ಅವರ ಮೂಲಕ ಮಾರ್ಚ್ ತಿಂಗಳಲ್ಲಿ ಆದೇಶ ಹೊರಡಿಸಿ ಕೆ.ಜಿ. 500ಕ್ಕೂ ಕಡಿಮೆ ದರ ವಿಧಿಸಿ ಅದನ್ನು ಉಲ್ಲಂಘಿಸಿದರೆ ಆಮದು ಮಾಡುವದನ್ನು ಸಂಪೂರ್ಣ ನಿಷೇಧಿಸಿತು.
ಈ ಆದೇಶವನ್ನು ಪ್ರಶ್ನಿಸಿ ಕೇರಳದ ಹಲವು ಆಮದು - ರಫ್ತುದಾರರು ಕೇರಳ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ವಿದೇಶ ವಹಿವಾಟು ಇಲಾಖೆಗೆ ಸರ್ಕಾರದ ನಿಯಮವನ್ನು ಬದಲಿಸುವ ಅಧಿಕಾರವಿಲ್ಲವೆಂದು ಯಾವದೇ ಬದಲಾವಣೆಗಳು ಸರ್ಕಾರದ ವತಿಯಿಂದಲೇ ಆಗಬೇಕೆಂದು ವಾದಿಸಿದರು. ಇದರೊಂದಿಗೆ ಆಮದು ಮತ್ತು ರಫ್ತು ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದೆ ಎಂದು ವಿವರಿಸಿದರು.
ದೇಶದಲ್ಲಿ 35 ರಿಂದ 66 ಸಾವಿರ ಟನ್‍ನಷ್ಟು ಕಾಳುಮೆಣಸು ಬೆಳೆಯಲಾಗುತ್ತಿದ್ದು, 55 ರಿಂದ 70 ಸಾವಿರ ಟನ್‍ನಷ್ಟು ದೇಶದಲ್ಲೇ ಬಳಕೆಯಾಗುತ್ತಿದೆ. ಆಮದಿಗೆ 20 ಸಾವಿರ ಹೆಚ್ಚುವರಿ ಟನ್ ಕಾಳುಮೆಣಸು ಬೇಕಾಗಿದ್ದು, ಹೊಸ ಆದೇಶದಿಂದ ವಹಿವಾಟು ಕುಂಠಿತಗೊಂಡಿದೆ ಎಂದು ಅರ್ಜಿದಾರರು ವಾದಿಸಿದರು. ದೇಶದಲ್ಲಿ ಗರಿಷ್ಠ ಪ್ರಮಾಣದ ಉತ್ಪಾದನೆ ಆದಾಗಲೂ ರಫ್ತು ವಹಿವಾಟಿಗೆ ಕಷ್ಟವಾಗುತ್ತಿದ್ದು, ಈ ಕಾರಣಗಳಿಂದಾಗಿ ಶ್ರೀಲಂಕಾ, ವಿಯೆಟ್ನಾಂ, ಇಂಡೋನೇಷ್ಯಾ ದೇಶಗಳಿಂದ ಇದನ್ನು ಆಮದು ಮಾಡಿಕೊಂಡು ಇತರ ಪದಾರ್ಥಗಳ ರಫ್ತಿಗೆ ಸಾಧ್ಯವಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಿದೇಶಗಳಲ್ಲಿ ಕಡಿಮೆ ಕಾರ್ಮಿಕ ವೇತನ ಹಾಗೂ ಹೆಚ್ಚು ಉತ್ಪಾದನೆ ಕೂಡ ಆಮದಿಗೆ ಸಹಕಾರಿಯಾಗಿತ್ತು ಎಂದು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ತಮ್ಮನ್ನು ಪ್ರತಿವಾದಿಗಳನ್ನಾಗಿ ಮಾಡಬೇಕೆಂದು ಕಾಳುಮೆಣಸು ಬೆಳೆಗಾರರ ಸಮನ್ವಯ ಸಮಿತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಾದ ವಿವಾದ ಆಲಿಸಿದ ನ್ಯಾಯಾಲಯ ದರ ಬದಲಾವಣೆಯ ಆದೇಶ ನೀಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದ್ದು, ವಿದೇಶಿ ವಹಿವಾಟು ಇಲಾಖೆಯ ವ್ಯಾಪ್ತಿಗೆ ಬರುವದಿಲ್ಲವೆಂದು ಆದೇಶಕ್ಕೆ ತಡೆ ನೀಡಿತು. ಈ ಹೊಸ ಆದೇಶದಿಂದ ಕಾನೂನಿನ ದೌರ್ಬಲ್ಯವನ್ನು ಬಳಸಿ ಮತ್ತೆ ಕಾಳುಮೆಣಸಿನ ಆಮದು ರಫ್ತು ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿಯುವ ಬಗ್ಗೆ ಬೆಳೆಗಾರರ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮನ್ವಯ ಸಮಿತಿಯ ಸಂಚಾಲಕ ಕೆ.ಕೆ. ವಿಶ್ವನಾಥ್ ಪ್ರಕರಣದ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರುಗಳಿಗೆ ಮನವರಿಗೆ ಮಾಡಿದ್ದು, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ.
ಕಳೆದ ವರ್ಷ ಗೋಣಿಕೊಪ್ಪಲು ಆರ್‍ಎಂಸಿ ಅನುಮತಿ ಪಡೆದು ಕಾಳುಮೆಣಸು ಆಮದು ಮಾಡುತ್ತಿದ್ದ ವ್ಯಕ್ತಿಯೊಬ್ಬ ಸ್ಥಳೀಯ ಮಾರುಕಟ್ಟೆಯಲ್ಲಿ ಅವನ್ನು ವಿಲೇವಾರಿ ಮಾಡುತ್ತಿದ್ದ ಪ್ರಕರಣ ಬಹಿರಂಗಗೊಂಡ ಬಳಿಕ ಇಡೀ ದೇಶದಲ್ಲಿ ಕರಿಮೆಣಸು ವಹಿವಾಟಿನ ಕರಿಛಾಯೆ ಅನಾವರಣಗೊಂಡಿತ್ತು.