ಸೋಮವಾರಪೇಟೆ, ಜು. 26: ‘ಕೊಡಗಿನವರು ಕಾಡಾನೆ, ಹುಲಿ ಸಿಂಹಗಳಿಗೆ ಹೆದರೋದಿಲ್ಲ;ಇನ್ನು ಈ ಮಳೆಗೆ ಹೆದರ್ತಾರಾ?’ ಎಂಬ ಮಾತು ಜಿಲ್ಲೆಯಲ್ಲಿ ಜನಜನಿತ. ಪ್ರಸಕ್ತ ಸಾಲಿನ ಮಳೆಗೆ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದರೂ ಕನ್ನಡ ತೇರನ್ನೆಳೆಯುವ ಕಾರ್ಯಕ್ಕೆ ಮಳೆ ಕೊಂಚವೂ ಅಡ್ಡಿಯಾಗಲಿಲ್ಲ. ವರ್ಷಾಧಾರೆಯ ನಡುವೆಯೂ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಕನ್ನಡ ಸಾಹಿತ್ಯದ ಹಬ್ಬ ಸಂಭ್ರಮದಿಂದಲೇ ನಡೆಯಿತು.ಮಳೆ ಕರುಣಿಸುವ ದೇವರೆಂದೇ ಪ್ರಸಿದ್ದಿಯಾಗಿರುವ ಮಳೆ ಮಲ್ಲೇಶ್ವರ ದೇವ ನೆಲೆ ಮಾಲಂಬಿ ಬೆಟ್ಟದ ತಟದಲ್ಲಿ ವಿಸ್ತರಿಸಿಕೊಂಡಿರುವ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪದವಿಪೂರ್ವ ಕಾಲೇಜು, ಆಶ್ರಮ ಶಾಲೆ, ಕೈಗಾರಿಕಾ ತರಬೇತಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆಗಳನ್ನು ಒಳಗೊಂಡಿರುವ ತಾಲೂಕಿನ ವಿದ್ಯಾಕಾಶಿ ಎಂದೇ ಕರೆಯಲ್ಪಡುವ ಆಲೂರು ಸಿದ್ದಾಪುರದಲ್ಲಿ ಅಚ್ಚುಕಟ್ಟಾಗಿ ನಡೆದ ಕನ್ನಡದ ಕಾರ್ಯಕ್ರಮ, ಭಾಷೆ, ಸಾಹಿತ್ಯದ ಆಚೆಗೂ ಕನ್ನಡದ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು.ಜಿಲ್ಲಾ ಕಸಾಪ ಮಾರ್ಗದರ್ಶನ ದಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಆಲೂರುಸಿ ದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನ ಸ್ಥಳೀಯರ ಪಾಲ್ಗೊಳ್ಳುವಿಕೆ ಯಿಂದಾಗಿ ಊರಿನ ಹಬ್ಬದಂತೆ ಸಂಭ್ರಮದಿಂದ ನಡೆಯಿತು.
ಸಮ್ಮೇಳನದ ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಯಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ ಗಳೊಂದಿಗೆ ಸಾವಿರಾರು ಕನ್ನಡ ಮನಸ್ಸುಗಳು ಪಾಲ್ಗೊಂಡು, ಕನ್ನಡದ ಕಳೆ ಕಟ್ಟಿದ್ದಂತೆ ಕಂಡುಬಂತು. ಸಮ್ಮೇಳನದ
(ಮೊದಲ ಪುಟದಿಂದ) ಅಂಗವಾಗಿ ಆಲೂರು ಸಿದ್ದಾಪುರವನ್ನು ತಳಿರುತೋರಣ ಗಳಿಂದ ಸಿಂಗರಿಸಿದ್ದರೆ, ಕನ್ನಡ ಬಾವುಟಗಳ ಅಳವಡಿಕೆಯೊಂದಿಗೆ ಎಲ್ಲೆಲ್ಲೂ ಕನ್ನಡಮಯ ಗೋಚರಿಸಿತು.
ಮಾಲಂಬಿ ರಸ್ತೆಯ ಪೆಟ್ರೋಲ್ ಬಂಕ್‍ನಿಂದ ಹೊರಟ ಮೆರವಣಿಗೆಯಲ್ಲಿ ಭುವನೇಶ್ವರಿ ರಥ, ಮಂಗಳವಾದ್ಯ, ಪೂರ್ಣಕುಂಭ, ವೈವಿಧ್ಯಮಯ ಕಲಾ ತಂಡಗಳು, ಡೊಳ್ಳುಕುಣಿತ, ಕಂಸಾಳೆ ನೃತ್ಯಗಳು ಕನ್ನಡತನದ ಶ್ರೀಮಂತಿಕೆಯನ್ನು ಪರಿಚಯಿಸಿದರೆ, ಇವುಗಳೊಂದಿಗೆ ವಿವಿಧ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು ಸೇರಿದಂತೆ ಕನ್ನಡ ಮನಸ್ಸುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಮೆರವಣಿಗೆಯುದ್ದಕ್ಕೂ ಕನ್ನಡಾಂಭೆ, ತಾಯಿ ಭುವನೇಶ್ವರಿಗೆ ಜೈಕಾರಗಳು ಮೊಳಗಿದವು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರುಗಳು ತೆರೆದ ವಾಹನದಲ್ಲಿದ್ದರು.
ಮಳೆ ಹನಿಗಳ ಸಿಂಚನದ ನಡುವೆಯೂ ಕನ್ನಡ ಮನಸ್ಸುಗಳು, ಮಳೆಯನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಪ್ಪಟ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹ ಮೆರವಣಿಗೆಯಲ್ಲಿ ಕಿಂಚಿತ್ತೂ ಅಳುಕದೇ ಸಂಭ್ರಮದಿಂದ ಭಾಗಿಯಾಗಿದ್ದುದು ಮಕ್ಕಳ ಕನ್ನಡಪ್ರೇಮವನ್ನು ಸಾರಿ ಹೇಳುವಂತಿತ್ತು.
ಇದಕ್ಕೂ ಮುನ್ನ ಆಲೂರು ಸಿದ್ದಾಪುರದ ಕುಶಾಲನಗರ ರಸ್ತೆ ಬಳಿ ನಿರ್ಮಿಸಲಾಗಿದ್ದ ಕ್ಯಾಪ್ಟನ್ ಟಿ.ಎಸ್. ಚಿಣ್ಣಪ್ಪ ದ್ವಾರವನ್ನು ಗ್ರಾ.ಪಂ. ಸದಸ್ಯ ಬಿ.ಡಿ. ಮೋಹನ್‍ಕುಮಾರ್, ಮಾಲಂಬಿ ರಸ್ತೆಯ ಕೈಸರವಳ್ಳಿ ಬಸಪ್ಪ ದ್ವಾರವನ್ನು ಗ್ರಾ.ಪಂ. ಸದಸ್ಯೆ ಕೆ.ಎನ್. ಶಶಿಕಲಾ, ಮಲ್ಲಿಪಟ್ಟಣ ರಸ್ತೆಯ ಎಂ.ಡಿ. ಸುಬ್ಬಯ್ಯ ದ್ವಾರವನ್ನು ಗ್ರಾ.ಪಂ. ಸದಸ್ಯೆ ನಾಗಮ್ಮ, ಕಾಲೇಜು ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮುಕ್ಕಾಟಿ ಗಣಪತಿ ದ್ವಾರವನ್ನು ಡಿ.ಎಂ. ತಮ್ಮಯ್ಯ, ಹೆಚ್.ಎಂ. ಶಾಂತವೀರಪ್ಪ ಮಹಾದ್ವಾರವನ್ನು ಗ್ರಾ.ಪಂ. ಉಪಾಧ್ಯಕ್ಷೆ ಕೆ. ಸತ್ಯ ಅವರುಗಳು ಉದ್ಘಾಟಿಸಿದರು.
ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಮಹೇಶ್, ಪರಿಷತ್ತಿನ ಧ್ವಜವನ್ನು ಬಿ.ಎಸ್. ಲೋಕೇಶ್‍ಸಾಗರ್, ನಾಡಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ನೆರವೇರಿಸಿದರು.
ಪ್ರಸಕ್ತ ಸಾಲಿನ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದು ಇದುವರೆಗೆ 4 ತಾಲೂಕು ಸಮ್ಮೇಳನ, 2 ಜಿಲ್ಲೆ, 2ಕೃಷಿ, 1 ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿದ್ದು, 10ನೇ ಸಮ್ಮೇಳನವಾಗಿ ಆಲೂರು ಸಿದ್ದಾಪುರದ ಸಮ್ಮೇಳನ ಸೇರ್ಪಡೆಗೊಂಡಿತು.
ಕೇವಲ 2 ವರ್ಷ 4 ತಿಂಗಳಿನಲ್ಲಿ ವಿವಿಧ 10 ಸಮ್ಮೇಳನಗಳನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಕನ್ನಡದ ತೇರನ್ನೆಳೆಯುತ್ತಿದ್ದು, ಕನ್ನಡ ಮನಸ್ಸುಗಳು, ಸಾಹಿತ್ಯಾಸಕ್ತರು, ಲೇಖಕರು, ಬರಹಗಾರರಿಗೆ ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿ ಬರಹಗಾರರ ಪುಸ್ತಕಗಳನ್ನು ಹೊರತರಲು ಕಸಾಪದಿಂದ ಇನ್ನಷ್ಟು ಪ್ರೋತ್ಸಾಹ ಲಭಿಸುವಂತಾಗಲಿ ಎಂದು ಸಮ್ಮೇಳನದಲ್ಲಿ ಭಾಗಿಯಾಗಿದ್ದ ಪ್ರಮುಖರು, ಲೇಖಕರು ಅಭಿಪ್ರಾಯಿಸಿದರು.
ಒಟ್ಟಾರೆ ತಾಲೂಕು ಕಸಾಪದಿಂದ ಮಳೆಗಾಲದ ಸಮಯದಲ್ಲಿ ಆಯೋಜನೆಗೊಂಡ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳೀಯರ ಸಹಕಾರ, ಕನ್ನಡ ಮನಸ್ಸುಗಳ ಭಾಗವಹಿಸುವಿಕೆ, ಲೇಖಕರು, ಕವಿಗಳು, ಬರಹಗಾರರು, ಸಾಹಿತ್ಯಾಸಕ್ತರ ಸಮ್ಮಿಲನದೊಂದಿಗೆ ಯಶಸ್ವಿಯಾಯಿತು.
-ವಿಜಯ್ ಹಾನಗಲ್