ಒಡೆಯನಪುರ, ಜು. 26: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ 34 ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ ಗುರುಪ್ರಸಾದ್ ನಂಜಪ್ಪ ಮತ್ತು ಪೂರ್ಣಿಮಾ ಅಯ್ಯಂಗಾರ್ ದಂಪತಿಯರು ಉಚಿತವಾಗಿ ಕ್ರೀಡಾ ಸಮವಸ್ತ್ರ ಸೇರಿದಂತೆ ಮಕ್ಕಳು ಚಳಿಯಿಂದ ರಕ್ಷಣೆ ಪಡೆಯಲು ಶಾಲು, ಟೆನಿಕಾಯಿಟ್, ಸ್ಕಿಪ್ಪಿಂಗ್ ರೋಪ್, ಚೆಸ್, ಸ್ನೇಕ್ ಅಂಡ್ ಲ್ಯಾಡರ್ ಮುಂತಾದ ಆಟದ ಸಾಮಗ್ರಿಗಳು ಹಾಗೂ ರೂ. 3 ಸಾವಿರ ಮೌಲ್ಯದ ಎಳೆಯ ಮಕ್ಕಳ ಮನೋಮಟ್ಟಕ್ಕೆ ಸೂಕ್ತವಾದ ಇಂಗ್ಲೀಷ್ ಕಲಿಕೆಗೆ ಪೂರಕವಾದ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಗುರುಪ್ರಸಾದ್, ಸರಕಾರಿ ಶಾಲೆಗಳ ಹಾಜರಾತಿ ಪ್ರಮಾಣ ಏರಿಕೆಯಾಗಬೇಕಾಗಿದೆ. ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸುವಂತೆ ಸಲಹೆ ನೀಡಿದರು. ಪ್ರಸ್ತುತ ದಿನದಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನಲ್ಲಿ 26 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಸಾಲಿನಲ್ಲಿ 34 ವಿದ್ಯಾರ್ಥಿಗಳಿಗೆ ಮಕ್ಕಳ ದಾಖಲಾತಿ ಏರಿಕೆಯಾಗಿರುವದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು. ಗುರುಪ್ರಸಾದ್ ಅವರು ಕಳೆದ ಸಾಲಿನಲ್ಲಿ ಶಾಲೆಗೆ ಕಂಪ್ಯೂಟರ್ ಸೇರಿದಂತೆ ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಿದ್ದರು. ಎಸ್‍ಡಿಎಂಸಿ ಸದಸ್ಯೆ ಧರ್ಮಾವತಿ, ನಂದಿನಿ, ಧರ್ಮಾಚಾರಿ, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕ ಸಿ.ಎಸ್. ಸತೀಶ್ ಮುಂತಾದವರು ಹಾಜರಿದ್ದರು.