ಗೋಣಿಕೊಪ್ಪ ವರದಿ: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಜೋಡಿ ಪ್ರತಿಮೆ ಎದುರು ನಡೆಸಲಾಯಿತು.
ವಿದ್ಯಾರ್ಥಿ ವೃಂದ ಹಾಗೂ ಉಪನ್ಯಾಸಕ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೈನಿಕರ ಪರವಾದ ಘೋಷಣೆಗಳನ್ನು ಕೂಗಿದರು. ಕಾರ್ಗಿಲ್ ವಿಜಯೋತ್ಸವದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತಾ, ಹಿರಿಯ ಉಪನ್ಯಾಸಕರುಗಳಾದÀ ಪ್ರೊ. ಎ.ಎಂ. ಕಮಲಾಕ್ಷಿ, ಪ್ರೊ. ಎಂ.ಎಸ್. ಭಾರತಿ ಪಾಲ್ಗೊಂಡಿದ್ದರು.
ಮೂರ್ನಾಡು: ಇಲ್ಲಿನ ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಕಾರ್ಗಿಲ್ ಯುದ್ದದಲ್ಲಿ ಹುತ್ಮಾತ್ಮರಾದ ಸೈನಿಕರಿಗೆ ಮೌನಾಚಾರಣೆ ಮಾಡಲಾಯಿತು. ಈ ಸಂದರ್ಭ ಹರ್ಷ ಮಂದಣ್ಣ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪ್ರಾಧ್ಯಾಪಕ ವೃಂದದವರು ಹಾಜರಿದ್ದರು.
ಸಿದ್ದಾಪುರ: ಶತ್ರುಗಳಿಂದ ನಮ್ಮಗಳ ರಕ್ಷಣೆಗಾಗಿ ಹಗಲಿರುಳು ಎನ್ನದೆ ದೇಶ ಸೇವೆ ಮಾಡುತ್ತಿರುವ ಸೈನಿಕರಿಗೆ ಗೌರವ ಸಲ್ಲಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ನಿವೃತ್ತ ಗ್ರೂಪ್ ಕ್ಯಾಪ್ಟನ್ ಪಿ.ಎಸ್. ವಾಸುಕಿ ಹೇಳಿದರು.
ಮೈಸೂರು ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ 19ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಾಲಿಬೆಟ್ಟದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ಯೋಧನಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಸೈನಿಕ ಮಂಡಳಿ ಸದಸ್ಯ ಜಿ.ಸಿ.ವಿಕ್ರಮ್‍ರಾಜ್ ಮಾತನಾಡಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮನಾದ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ದಿ.ವೆಂಕಟ್ ಹಾಗೂ ತಾನು ಈ ಶಾಲೆಯಲ್ಲಿ ಸಹಪಾಟಿಗಳಾಗಿದ್ದೆವು ಯುದ್ಧದ ಸಮಯ ಶತ್ರುಗಳಿಂದ ದೇಶ ರಕ್ಷಿಸಲು ಪ್ರಾಣ ಮುಡಿಪಾಗಿಟ್ಟ ಸ್ನೇಹಿತನ ಕರ್ತವ್ಯ ಮರೆಯಲಾಗದು. ವಿದ್ಯಾರ್ಥಿ ಜೀವನದಲ್ಲಿಯೇ ದೇಶ ಸೇವೆಯ ಕನಸುಕಂಡು ಪ್ರತಿಯೊಬ್ಬರು ಸೈನಿಕರಂತೆ ದೇಶ ರಕ್ಷಣೆಗೆ ಮುಂದಾಗಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುರುವಂಡ ಪೊನ್ನಪ್ಪ ಮಾತನಾಡಿ ಯುದ್ದದಲ್ಲಿ ಹುತಾತ್ಮರಾದ ಯೋಧರ ಕುಟುಂಬ ವರ್ಗದ ಸ್ಥಿತಿ ಶೋಚನೀಯವಾಗಿದ್ದು ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿರುವದು ದುರಂತ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮನಾದ ದಿ. ವೆಂಕಟ್ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮೌನ ಆಚರಿಸಿ ಗೌರವ ಸಲ್ಲಿಸಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಸುಭೇದಾರ್ ರವಿಕುಮಾರ್‍ಬೆಕ್ಕರೆ, ಉದ್ಯಮಿ ದೇವರಾಜ್, ಮುಖ್ಯಶಿಕ್ಷಕ ಕೆ.ಎಂ. ಮಾದಪ್ಪ, ಶಿಕ್ಷಕರಾದ ಕುಂಟಯ್ಯ, ಶಾಲಿನಿ, ಶರ್ಲಿ, ಕಸ್ತೂರಿ, ಹೇಮಾವತಿ, ಭವ್ಯ, ರಾಣಿ, ಬೋಜ ಹಾಜರಿದ್ದರು.
ಸೋಮವಾರಪೇಟೆ: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ 19ನೇ ವರ್ಷದ ಕಾರ್ಗಿಲ್ ವಿಜಯ ದಿನವನ್ನು ಪತ್ರಿಕಾಭವನದಲ್ಲಿ ಆಚರಿಸಲಾಯಿತು.
ಹಲವಾರು ಸೈನಿಕರ ತ್ಯಾಗ ಬಲಿದಾನದ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಜಯ ಸಿಕ್ಕಿದೆ. ಹತ್ತಾರು ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಇಂದು ಸೈನಿಕರ ಬಲಿದಾನದ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸೈನಿಕರಿಗೆ ಸಿಗಬೇಕಾದ ಸೌಲಭ್ಯ ದೊರೆಯುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಈರಪ್ಪ ವಿಷಾದಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್, ವಾಹನ ಚಾಲಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್ ಇದ್ದರು.
ಕಾರ್ಯಕ್ರಮದಲ್ಲಿ ಅಮರ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಗಿಲ್ ಯುದ್ದದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಮೌನಾಚರಿಸಲಾಯಿತು.
ಲಯನ್ಸ್ ಕ್ಲಬ್: ಮಡಿಕೇರಿಯಲ್ಲಿರುವ ಹುತಾತ್ಮ ವೀರ ಯೋಧರ ಸ್ಮಾರಕಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಅಧ್ಯಕ್ಷ ಕೆ.ಕೆ. ದಾಮೋದರ್, ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಪಟ್ರಪಂಡ ಸೋಮಣ್ಣ, ಖಜಾಂಚಿ ಬಾಚಿನಾಡಂಡ ನಂಜಪ್ಪ, ಕನ್ನಂಡ ಬೊಳ್ಳಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಮುರುಗೇಶ್, ಬಾಬುಚಂದ್ರ ಉಳ್ಳಾಗಡ್ಡಿ, ಮಧುಕರ್, ಫಾದರ್ ಮಸ್ಕರೆನಸ್, ಸಂತೋಷ್ ಅಣ್ವೇಕರ್ ಜೆ.ವಿ. ಕೋಟಿ ಇವರುಗಳು ಪುಷ್ಪ ನಮನ ಸಲ್ಲಿಸಿದರು.
*ಗೋಣಿಕೊಪ್ಪಲು: ತಿತಿಮತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಸುಭೇದಾರ್ ಲೆಫ್ಟಿನೆಂಟ್ ಬಿ.ಎ. ನಂಜಪ್ಪ ಅವರನ್ನು ಪ್ರಾಂಶುಪಾಲ ರಾಜಣ್ಣ, ಮುಖ್ಯ ಶಿಕ್ಷಕ ದಿನೇಶ್ ಹಾಗೂ ಶಿಕ್ಷಕರು ಸನ್ಮಾನಿಸಿದರು.
ವೀರಾಜಪೇಟೆ: ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂದಿರುವ ಯೋಧರ ಸ್ಮಾರಕಕ್ಕೆ ಇಂದು ಬೆಳಿಗ್ಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪುಷ್ಪಗುಚ್ಚ ಇರಿಸಿ ಗೌರವ ಸಲ್ಲಿಸಿದರು. ಇದೇ ಸಂದÀರ್ಭದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಕರ್ನಲ್ ಭರತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್, ತಹಶೀಲ್ದಾರ್ ಆರ್ ಗೋವಿಂದರಾಜು, ಡಿವೈಎಸ್‍ಪಿ ನಾಗಪ್ಪ, ವೃತ್ತ ನೀರೀಕ್ಷಕ ಕುಮಾರ್ ಆರಾಧ್ಯ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ ಹೇಮ್‍ಕುಮಾರ್, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಉಪಾಧ್ಯಕ್ಷ ಕರುಂಬಯ್ಯ, ಕಾರ್ಯದರ್ಶಿ ಚಪ್ಪಂಡ ಹರೀಶ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿüಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ವೀರಾಜಪೇಟೆ ಸೇನಾ ಸಹಕಾರ ಸಂಘದಲ್ಲಿ ಸೈನಿಕರಿಗೆ ಮದ್ಯ ವಿತರಣೆ ಮಾಡಲು ಸರಕಾರ ಮತ್ತು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಮನವಿ ಮಾಡಿದರೂ ನೈಜತೆಯನ್ನು ಅರಿಯದೆ ವರ್ತಿಸುತ್ತಿದ್ದಾರೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವದಲ್ಲದೆ, ಕರಾಳ ದಿನವನ್ನಾಗಿ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮದ್ಯ ಪರವಾನಿಗೆಗೆ ಪ್ರಯತ್ನ ನಡೆಸುತ್ತಿದ್ದರೂ, ವಾಸ್ತವ ಅರಿಯದ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸೈನಿಕರು ಶಿಸ್ತಿನ ಸಿಪಾಯಿಗಳು ಮದ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತೂರಾಡುವದಿಲ್ಲ ಎಂಬದು ಅಧಿಕಾರಿಗಳಿಗೆ ತಿಳಿದಿರಬೇಕು. ಕುಟ್ಟ, ಬಾಳೆಲೆ, ಬಿರುನಾಣಿ ಯಂತಹ ದೂರದಿಂದ ಮಡಿಕೇರಿಗೆ ಮದ್ಯಕ್ಕಾಗಿ ಹೋಗಬೇಕು; ವೀರಾಜಪೇಟೆಯಲ್ಲಿಯೇ ವಯೋವೃದ್ಧರು, ವಿಧವೆಯರಿಗೆ ಅನುಕೂಲವಾಗಲಿದೆ ಎಂದರು.
ವೀರಾಜಪೇಟೆಯಲ್ಲಿ ಸೈನಿಕರ ಆಸ್ವತ್ರೆಗೆ, ಕ್ಯಾಂಟೀನ್‍ಗಳಿಗೆ ಸೂಕ್ತ ನಿವೇಶನ ನೀಡುತ್ತಿಲ್ಲ. ಸಾಕಷ್ಟು ಸರಕಾರಿ ಭೂಮಿ ಇದ್ದರೂ ಅರ್ಹರಿಗೆ ಜಾಗ ನೀಡಲು ಸರಕಾರಕ್ಕೆ, ಅಧಿಕಾರಿಗಳಿಗೆ ಮನಸಿಲ್ಲ. ಈ ಮೂಲಕ ದೇಶ ಸೇವೆ ಮಾಡಿದ ಸೈನಿಕರನ್ನು ಅಪಮಾನಿಸುತ್ತಿದ್ದಾರೆ. ಇದೀಗ ಮತ್ತೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಮದ್ಯ ವಿತರಣೆಗೆ ಪರವಾನಿಗೆ ನೀಡದಿದ್ದರೆ ಹೋರಾಟ ಮಾಡುವದಾಗಿ ಹೇಳಿದರು.
ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಇಲ್ಲಿನ ಪಕ್ಷದ ಕಚೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಯುವ ಮೋರ್ಚಾ ಅಧ್ಯಕ್ಷ ಸುನಿಲ್, ಬಿಜೆಪಿ ತಾಲೂಕು ಅಧ್ಯಕ್ಷ ಕುಮಾರಪ್ಪ, ಕಾರ್ಯದರ್ಶಿ ಮನುಕುಮಾರ್ ರೈ, ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ಕಿಬ್ಬೆಟ್ಟ ಮಧು, ಕೃಷ್ಣಪ್ಪ, ಶರತ್‍ಚಂದ್ರ, ವರದ, ಲೀಲಾ ನಿರ್ವಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ತಾಲೂಕಿನ ಸಿದ್ದಾಪುರದ ಮಾಜೀ ಸೈನಿಕ ಪ್ರಕಾಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶ್ರೀಮಂಗಲ: ಟಿ.ಶೆಟ್ಟಿಗೇರಿಯ ಮಾಜಿ ಸೈನಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇಲ್ಲಿನ ಮಾಜಿ ಸೈನಿಕ ಸಂಘದÀ ಕಛೇರಿ ಸಭಾಂಗಣದಲ್ಲಿ ಸಮಾರಂಭ ನಡೆಸಿ, ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ ಧ್ವಜಾರೋಹಣ ಮಾಡಿದರು. ನಂತರ ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷ ಮನ್ನೇರ ರಮೇಶ್, ಖಜಾಂಚಿ ಚಂಗುಲಂಡ ಸತೀಶ್, ಕಾರ್ಯದರ್ಶಿ ಉಳುವಂಗಡ ಗಣಪತಿ, ಮಾಯಣಮಾಡ ಸೋಮಯ್ಯ, ಮಾಜಿ ಅಧ್ಯಕ್ಷ ಚೆಟ್ರಂಡ ಕಾರ್ಯಪ್ಪ ಹಾಗೂ ಸಂಘದ ಸದಸ್ಯರು ಹಾಜರಿದ್ದರು.