ಮಡಿಕೇರಿ, ಜು. 26: ಭಾರತದ ಗಡಿಯಲ್ಲಿ ಅಕ್ರಮವಾಗಿ ನುಸುಳಿ ಬಂದು, ಅಮಾನುಷವಾಗಿ ಮೋಸದಿಂದ 527 ಯೋಧರನ್ನು ಬಲಿಪಡೆಯುವದ ರೊಂದಿಗೆ, ಸಾವಿರಾರು ಸೈನಿಕರನ್ನು ಘಾಸಿಗೊಳಿಸಿದ್ದ, ನೆರೆಯರಾಷ್ಟ್ರ ಪಾಕಿಸ್ತಾನದ ರಣಹೇಡಿಗಳನ್ನು ಹಿಮ್ಮೆಟ್ಟಿಸಿದ ನಮ್ಮ ಸೈನಿಕರನ್ನು ಸಮಾಜವು ಸದಾ ಗೌರವದಿಂದ ಕಾಣುವಂತೆ ಲೆಪ್ಟಿನೆಂಟ್ ಕರ್ನಲ್ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಎಂ. ಶೆಟ್ಟಿ ಕರೆ ನೀಡಿದ್ದಾರೆ.ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ದಿಂದ ನಗರದ ಯುದ್ಧ ಸ್ಮಾರಕದಲ್ಲಿ ಇಂದು ಅಗಲಿದ ಯೋಧರಿಗೆ ವೀರ ನಮನದೊಂದಿಗೆ, ಕಾರ್ಗಿಲ್ ವಿಜಯೋತ್ಸವದ 19ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.(ಮೊದಲ ಪುಟದಿಂದ) ದೇಶದ ಸೈನಿಕರನ್ನು ಸಮಾಜ ಸದಾ ಸ್ಮರಿಸಿಕೊಳ್ಳುವ ದಿಸೆಯಲ್ಲಿ ಸಂಘ - ಸಂಸ್ಥೆಗಳು ಇಂತಹ ಕಾರ್ಯಕ್ರಮ ಆಯೋಜಿಸಿ, ರಕ್ತದಾನ ಶಿಬಿರ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದು ನುಡಿದ ಅವರು, ಯುದ್ಧ ಕಾಲದಲ್ಲಿ ಮಾತ್ರ ಸೈನಿಕರನ್ನು ಸಮಾಜ ಗೌರವದಿಂದ ಕಂಡ ಸನ್ನಿವೇಶವನ್ನು ತಾವು ಕಾರ್ಗಿಲ್ ಯುದ್ಧ ಸಂದರ್ಭ ದೆಹಲಿಯಲ್ಲಿ ಕರ್ತವ್ಯದ ವೇಳೆ ಕಂಡಿದ್ದಾಗಿ ಅನುಭವ ಹಂಚಿಕೊಂಡರು.
ಆ ದಿನಗಳಲ್ಲಿ ದೇಶದ ಜನತೆ ಸ್ವಯಂ ಸೇನೆಗೆ ಸೇರಲು ಒಲವು ತೋರಿದ್ದಾಗಿ ನುಡಿದ ಅವರು, ಆಸ್ಪತ್ರೆಗಳಲ್ಲಿ ತೀವ್ರ ಗಾಯಗಳೊಂದಿಗೆ ಚಿಕಿತ್ಸೆಗೆ ಒಳಗಾಗಿದ್ದ ಯೋಧರು ಕೂಡ, ತಾವು ಆ ಸ್ಥಿತಿಯಲ್ಲೂ ಸಮರಾಂಗಣಕ್ಕೆ ತೆರಳಲು ಉತ್ಸುಕರಾಗಿ ಇದ್ದರೆಂದು ನೆನಪಿಸಿದರು.
ಸದಾ ಕಾಲ ತಮ್ಮ ಬದುಕನ್ನು ದೇಶ ಸೇವೆಗಾಗಿ ಮುಡಿಪಿರಿಸುವ ಸೈನಿಕರು ಮತ್ತು ಅವರ ಕುಟುಂಬವನ್ನು ನಿವೃತ್ತಿಯ ದಿನಗಳಲ್ಲಿ ಸಮಾಜ ಗೌರವದಿಂದ ನಡೆಸಿಕೊಳ್ಳಬೇಕೆಂದು ಲೆ. ಗೀತಾ ತಿಳಿಹೇಳಿದರು. ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್, ಕಾರ್ಗಿಲ್ ಹೋರಾಟದೊಂದಿಗೆ, 1948 ಹಾಗೂ 1965, 1971 ಮತ್ತು 1999ರಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಮೋಸದ ಹಾದಿಯಲ್ಲಿ ಯುದ್ಧ ಸಾರುವ ಮುಖಾಂತರ ಮುಖಭಂಗ ಅನುಭವಿಸಿ ಹಿಮ್ಮೆಟ್ಟಿದ ಸನ್ನಿವೇಶವನ್ನು ಎಳೆ ಎಳೆಯಾಗಿ ವಿವರಿಸಿದರು.
ನಿವೃತ್ತ ಸೈನ್ಯಾಧಿಕಾರಿಗಳಾದ ಮೆ. ಚಿಂಗಪ್ಪ, ಕೆ.ಎಸ್. ಆನಂದ್, ನಂದಾ ಮಾದಪ್ಪ, ಎಂ.ಎ. ಅಚ್ಚಯ್ಯ, ಗಣಪತಿ, ಚಂದ್ರ, ಮಾದಪ್ಪ, ಅಯ್ಯಪ್ಪ ನಾಚಪ್ಪ ಸೇರಿದಂತೆ ವಿ.ಹಿಂ.ಪ. ಕಾರ್ಯಾಧ್ಯಕ್ಷ ಐ.ಎಂ. ಅಪ್ಪಯ್ಯ, ಭಜರಂಗದಳ ಸಂಚಾಲಕ ಚೇತನ್ ಹಾಗೂ ಸಂಘ ಪರಿವಾರ, ಬಿಜೆಪಿ ಪ್ರಮುಖರು, ನಗರಸಭಾ ಸದಸ್ಯರು ಹಾಜರಿದ್ದರು. ವಿ.ಹಿಂ.ಪ. ಕಾರ್ಯದರ್ಶಿ ಡಿ. ನರಸಿಂಹ ಸ್ವಾಗತಿಸಿ, ಭಜರಂಗದಳದ ವಿನಯ್ ನಿರೂಪಿಸಿ, ಭಾರತೀ ರಮೇಶ್ ವಂದೇ ಮಾತರಂ ಹಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನೆರೆದಿದ್ದ ಪ್ರಮುಖರು ಸ್ಮಾರಕಕ್ಕೆ ಪುಷ್ಪ ನಮನದೊಂದಿಗೆ ಹುತಾತ್ಮ ಯೋಧರಿಗೆ ಗೌರವ ಸೂಚಿಸಿದರು. ನವನೀತ್ ವಂದಿಸಿದರು.
ರಕ್ತದಾನ : ಬಳಿಕ ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಈ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. ಅನೇಕರು ರಕ್ತದಾನ ನೀಡಿದರು. ಸಂಘಟನೆ ಪ್ರಮುಖರು, ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು, ಇತರ ವೈದ್ಯ ಸಿಬ್ಬಂದಿ ಶಿಬಿರದ ಯಶಸ್ವಿಗೆ ಶ್ರಮಿಸಿದರು.