ಮಡಿಕೇರಿ, ಜು. 26: ಇಡೀ ಸಮಾಜವನ್ನು ಕಣ್ಣಮುಂದೆ ಇಟ್ಟುಕೊಂಡು ಸಂಘ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಅಂತಿಮ ಲಕ್ಷ್ಯ ಇಡೀ ಸಮಾಜವನ್ನು ಸಂಘಟಿಸುವದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಸಂಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಮಡಿಕೇರಿ ನಗರ ಶಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ಗುರುಪೂಜಾ ಉತ್ಸವದಲ್ಲಿ ಉಪನ್ಯಾಸ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಸಂಘ ಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಇಡೀ ಸಮಾಜವನ್ನು ಒಟ್ಟು ಮಾಡಬೇಕೆಂಬ ಚಿಂತನೆಯಿಂದ ಸಂಘವನ್ನು ಪ್ರಾರಂಭಿಸಿದರು. ತ್ಯಾಗ, ಸಮರ್ಪಣೆಯ ಸಂಕೇತವಾದ ಭಗವಾಧ್ವಜವನ್ನು ಸಂಘ ಗುರುವಾಗಿ ಸ್ವೀಕಾರ ಮಾಡಿದೆ. ಸಂಘದ ಶಾಖೆಗಳಲ್ಲಿ ಸಮಾಜ ಕಟ್ಟುವ, ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಕೆಲಸಗಳಾಗುತ್ತಿದೆ. ವಿಶ್ವದ ಜನ ಭಾರತ ಮಾತಾಕೀ ಜೈ ಹೇಳುವಂತಾಗಬೇಕು. ಅಲ್ಲಿಯವರೆಗೆ ಸಂಘ ಕೆಲಸ ಮಾಡುತ್ತದೆ. ಭಾಷೆ, ಸಂಸ್ಕøತಿ ಇಂದು ಮರೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸ ಸಂಘದ ಶಾಖೆಗಳಿಂದಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಮಾತೃಭೂಮಿ, ಧರ್ಮವನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಸಂಘ, ಶಿಸ್ತು, ಸಮಯಪಾಲನೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯು ಪ್ಯಾರಾಮಿಲಿಟರಿ ರೀತಿಯಲ್ಲಿ ಸಮಾಜದಲ್ಲಿ ಕಾರ್ಯ ಮಾಡುತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪ್ರತಿರೋಧದ ಅಗತ್ಯವಿದೆ ಎಂದರು.
ಕೆ.ಕೆ. ಮಹೇಶ್ ಕುಮಾರ್ ಪ್ರಾರ್ಥಿಸಿ, ಶಿವಾಜಿ ಸ್ವಾಗತಿಸಿ, ಪವನ್ ವಶಿಷ್ಠ ವಂದಿಸಿ, ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಹಿರಿಯ ಸ್ವಯಂಸೇವಕರಾದ ಡಾ. ಪಾಟ್ಕರ್, ಜಯಲಕ್ಷ್ಮೀ ಪಾಟ್ಕರ್ ಹಾಗೂ ಇತರರು ಇದ್ದರು.