ಮಡಿಕೇರಿ, ಜು. 26: ಮಡಿಕೇರಿ ನಗರಸಭೆ ಸಾರ್ವಜನಿಕರು ಪಾವತಿಸಿರುವ ತೆರಿಗೆ ಹಣವನ್ನು ವಂಚಿಸಿರುವ ಸಿಬ್ಬಂದಿಗಳಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವದ ರೊಂದಿಗೆ ವಂಚಿತ ಹಣ ಭರಿಸಲು ಅಗತ್ಯ ಗಮನಹರಿಸ ಬೇಕೆಂದು ಇಂದು ನಡೆದ ನಗರಸಭಾ ಸಾಮಾನ್ಯ ಬೇಡಿಕೆ ಮಂಡಿಸಿದರು.ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ವಿಷಯ ಪ್ರಸ್ತಾಪಿಸುತ್ತಾ, ಕೋಟಿಗಟ್ಟಲೆ ಜನರ ತೆರಿಗೆ ವಂಚನೆಯೊಂದಿಗೆ ಮೂರ್ನಾಲ್ಕು ವರ್ಷಗಳಿಂದ ಲೆಕ್ಕ ತಪಾಸಣೆಯೂ ನಡೆಯದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಪ್ಪಿತಸ್ಥ ಸಿಬ್ಬಂದಿಗಳಾದ ಸಜಿತ್ಕುಮಾರ್ ಹಾಗೂ ಕೆ.ಎನ್. ಸ್ವಾಮಿ ಆರೋಪಿಗಳೆಂದು ಸಾಬೀತುಗೊಂಡಿದ್ದರೂ ಯಾವದೇ ಕ್ರಮ ಜರುಗಿಸಿಲ್ಲವೆಂದು ಟೀಕಾ ಪ್ರಹಾರ ನಡೆಸಿದರು.ಈ ಬಗ್ಗೆ ದÀನಿಗೂಡಿಸಿದ ಮತ್ತೋರ್ವ ಸದಸ್ಯ ಚುಮ್ಮಿ ದೇವಯ್ಯ ತಪ್ಪಿತಸ್ಥ ಸಿಬ್ಬಂದಿಗಳ ಜೊತೆಗೆ ಇನ್ನು ಇಬ್ಬರು ಸಹಿತ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆಯಿದ್ದು, ಯಾರೂ ತಪ್ಪಿತಸ್ಥರನ್ನು ರಕ್ಷಿಸಲು ಯತ್ನಿಸದಂತೆ ಒತ್ತಾಯಿಸಿದರು. ಅಲ್ಲದೆ, ನಗರಸಭೆ ಸಕಾಲದಲ್ಲಿ ಸ್ಪಂದಿಸದೆ
(ಮೊದಲ ಪುಟದಿಂದ) ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿರುವ ಅಂಶವನ್ನು ಬೊಟ್ಟು ಮಾಡಿದರು.
ಗಂಭೀರ ಆರೋಪ : ಅಲ್ಲದೆ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ರೂಪಿಸುವಲ್ಲಿ ಸಿಬ್ಬಂದಿಗಳಲ್ಲಿ ಕೆಲವರು ನಗರಸಭೆಗೆ ವಂಚಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಅನಿತಾ ಪೂವಯ್ಯ, ಕೆ.ಎಸ್. ರಮೇಶ್, ಅಮೀನ್ ಮೊಹಿಸಿನ್, ಮನ್ಸೂರ್ ಹಾಗೂ ಇತರರು ದÀನಿಗೂಡಿಸಿದರು.
ಆಯುಕ್ತೆ ಸ್ಪಷ್ಟನೆ : ಈ ಬಗ್ಗೆ ಸ್ಪಷ್ಟನೆ ನೀಡಿದ ಆಯುಕ್ತೆ ಶುಭಾ ಕಾನೂನು ಪ್ರಕಾರ ತನಿಖೆಯೊಂದಿಗೆ ಸಜಿತ್ಕುಮಾರ್ ಹಾಗೂ ಸ್ವಾಮಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಯಾರನ್ನೂ ರಕ್ಷಿಸುವ ಉದ್ದೇಶವೆಂದೂ ಸಂಬಂಧಿಸಿದ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ಲಿಖಿತ ರೂಪದಲ್ಲಿ ಕೋರಲಾಗಿದೆ ಎಂದು ವಿವರಿಸಿದರು.
ತನಿಖೆಗೆ ಆಗ್ರಹ : ಈ ನಡುವೆ ನಗರಸಭೆ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ವಿಧಿಸುವಲ್ಲಿ ವಂಚನೆಯಾಗುತ್ತಿದೆ ಎಂದು ಚುಮ್ಮಿ ದೇವಯ್ಯ ಆರೋಪಕ್ಕೆ ಉಪಾಧ್ಯಕ್ಷ ಪ್ರಕಾಶ್ ಸೇರಿದಂತೆ ಸರ್ವ ಸದಸ್ಯರು ಧನಿ ಸೇರಿಸಿ ಪ್ರಥಮ ಹಂತದಲ್ಲಿ 2 ತಿಂಗಳ ಒಳಗೆ ಆಯುಕ್ತೆ ಶುಭಾ ತನಿಖೆ ಕೈಗೊಂಡು ವರದಿ ಸಲ್ಲಿಸಿ ತಪ್ಪಾಗಿದ್ದರೆ ಅಂತಹವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಸಲ್ಲಿಸಲು ನಿರ್ಧರಿಸಲಾಯಿತು.
ಮುಖಮಂತ್ರಿ ಬಳಿ ನಿಯೋಗ : ಮಡಿಕೇರಿ ಹದಗೆಟ್ಟಿರುವ ರಸ್ತೆಗಳು, ಸಿಬ್ಬಂದಿ ಕೊರತೆ ಸೇರಿದಂತೆ ಅಭಿವೃದ್ಧಿಗಾಗಿ ವಿಶೇಷ ನೆರವು ಪಡೆಯಲು ಶೀಘ್ರವೇ ಮುಖ್ಯಮಂತ್ರಿ ಬಳಿ ಅಧ್ಯಕ್ಷರ ಸಹಿತ ನಿಯೋಗ ತೆರಳಲು ತೀರ್ಮಾನಿಸಲಾಯಿತು. ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಸಹಿತ ಎಲ್ಲ ಆಸಕ್ತ ಸದಸ್ಯರೊಡಗೂಡಿ ಹೋಗುವ ನಿರ್ಧಾರ ಕೈಗೊಳ್ಳಲಾಯಿತು.
ಇತರ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ತಜುಸ್ಸುಂ, ಸವಿತಾ ರಾಕೇಶ್, ಸಂಗೀತಾ ಪ್ರಸನ್ನ, ವೀಣಾಕ್ಷಿ, ಪೀಟರ್, ಶ್ರೀಮತಿ ಬಂಗೇರ ಮೊದಲಾದವರು ಆಯಾ ವಾರ್ಡ್ಗಳ ರಸ್ತೆ ದುರವಸ್ಥೆ, ಜನರ ವಿವಿಧ ಅಹವಾಲುಗಳು, ಜನನ - ಮರಣ ಪತ್ರ, ಮನೆಗಳಿಗೆ ನಿರಾಕ್ಷೇಷಣಾ ಪತ್ರ ಇತ್ಯಾದಿ ಬಗ್ಗೆ ಕೆಲವರು ಕಚೇರಿಗಳಲ್ಲಿ ಸತಾಯಿಸುತ್ತಿರುವ ಆರೋಪ ಮಾಡಿದರು. ಇನ್ನೊಂದೆಡೆ ಹಣದೊಂದಿಗೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಅಂತಹವರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಕೆಲವರು ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಕೆ.ಎಸ್. ರಮೇಶ್ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದರು.