ಸೋಮವಾರಪೇಟೆ, ಜು. 26: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಆಲೂರು ಸಿದ್ದಾಪುರದಲ್ಲಿ ಆಯೋಜಿಸಲಾಗಿದ್ದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಹಿತಕಾಯುವ 14 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ನಿರ್ಮಿಸ ಲಾಗಿದ್ದ ಜಂಗಮರ ಶರಣೆ ಲಿಂಗೈಕ್ಯೆ ಶಾಂತಮ್ಮ ಪ್ರಧಾನ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕನ್ನಡ ಮನಸ್ಸುಗಳು ನಿರ್ಣಯಗಳನ್ನು ಅಂಗೀಕರಿಸಿದವು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ 14 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಆಲೂರು ಸಿದ್ದಾಪುರದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ, ಸೈನಿಕ ಶಾಲೆ, ಆರ್ಮಿ ಕ್ಯಾಂಟೀನ್, ಬಸ್ ನಿಲ್ದಾಣ ನಿರ್ಮಾಣ, ಹೊನ್ನಮ್ಮನ ಕೆರೆ, ಮಾಲಂಬಿ ಬೆಟ್ಟ,ದೊಡ್ಡಪಾರೆ, ಮುಳ್ಳೂರು ಜೈನ ಬಸದಿ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳ ಅಭಿವೃದ್ಧಿ, ತಾಲೂಕಿನ ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸುವದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ತಾಲೂಕಿನಾದ್ಯಂತ ಬಸ್ ನಿಲ್ದಾಣಗಳ ನಿರ್ಮಾಣ, ತಾಲೂಕಿನ ಸಾಹಿತಿಗಳ ಕೃತಿಗಳನ್ನು ಸರ್ಕಾರವೇ ಮುದ್ರಿಸಿ ಗ್ರಂಥಾಲಯಗಳಿಗೆ ನೀಡುವದು, ಅನ್ಯ ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ-ಜಾಗೃತಿ ಮೂಡಿಸಲು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸು ವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಯಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ತಾಲೂಕಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನ ಹೋರಾಟ, ಸಾಹಿತಿಗಳ ಅರ್ಹ ಕೃತಿಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಠ್ಯದಲ್ಲಿ ಅಳವಡಿಕೆ, ಕುಶಾಲನಗರವನ್ನು ಕಾವೇರಿ ತಾಲೂಕಾಗಿ ಮಾರ್ಪಡಿಸಲು ಮುಂದಾದರೆ ಸಕಲೇಶಪುರದ ಹೆತ್ತೂರು ಮತ್ತು ಚಂಗಡಹಳ್ಳಿ ಹೋಬಳಿಗಳನ್ನು ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸುವದು, ಪ್ರಸಕ್ತ ಸಾಲಿನ ಅತೀವೃಷ್ಟಿಯಿಂದ ಕೊಡಗಿನಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಇದನ್ನು ಸರಿದೂಗಿಸಲು ವಿಶೇಷ ಪ್ಯಾಕೇಜ್ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಾರೋಪ: ಬಹಿರಂಗ ಅಧಿವೇಶನದ ನಂತರ ಸಮಾರೋಪ ಸಮಾರಂಭ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಿತು. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ತಿಲಗಾರ್ ಅವರು ಸಮಾರೋಪ ಭಾಷಣ ಮಾಡಿದರು.
ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸಮಿತಿ ಪದಾಧಿಕಾರಿ ಗಳಾದ ಸಿ.ಕೆ. ಚಂದ್ರಶೇಖರ್, ರಾಘವಯ್ಯ, ಭರತ್ಕುಮಾರ್, ಜಿ.ಪಂ. ಮಾಜೀ ಸದಸ್ಯ ವಿ.ಪಿ. ಶಶಿಧರ್, ಪ್ರಮುಖರಾದ ರಮೇಶ್, ಪ್ರಸನ್ನ, ಚಂದ್ರೇಗೌಡ, ಪ್ರೇಮನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.