ಸೋಮವಾರಪೇಟೆ, ಜು.26 : ಇಲ್ಲಿನ ಲಯನ್ಸ್ ಕ್ಲಬ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಪಿ.ಕಿಶೋರ್ ರಾವ್, ಲಯನ್ಸ್ ಸಂಸ್ಥೆ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದ್ದು, ಪ್ರತಿಯೊಬ್ಬ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
224 ರಾಷ್ಟ್ರಗಳಲ್ಲಿ 45ಸಾವಿರದಷ್ಟು ಲಯನ್ಸ್ ಕ್ಲಬ್‍ಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಪ್ರಾಕೃತಿಕ ವಿಕೋಪದ ಸಂದರ್ಭ ಸಂಸ್ಥೆಯ ಸದಸ್ಯರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಉಚಿತ ಕಣ್ಣಿನ ಚಿಕಿತ್ಸೆ, ರಕ್ತದಾನ ಮತ್ತಿತರ ಸೇವಾ ಕಾರ್ಯದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಸೇವಾ ಮನೋಭಾವವಿರುವ ಪ್ರತಿಯೊಬ್ಬರೂ ಸಂಸ್ಥೆಯಲ್ಲಿ ಸೇರ್ಪಡೆಗೊಂಡು ಸಮಾಜಸೇವೆ ಮಾಡಬಹುದು ಎಂದರು.
ಲಯನ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎ.ಎಸ್. ಮಹೇಶ್ ಅವರು ಕಳೆದ ಮೂರು ವರ್ಷಗಳಿಂದ ಜನಪರ ಯೋಜನೆಗಳನ್ನು ಕೈಗೊಂಡು ಉತ್ತಮ ಸೇವೆ ಸಲ್ಲಿಸಿರುವದರಿಂದ ಈ ಸಂಸ್ಥೆಗೆ ಅನೇಕ ಪ್ರಶಸ್ತಿಗಳು ಸಂದಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಂದಿನ ಸಾಲಿನ ಅಧ್ಯಕ್ಷರಾಗಿ ಎಸ್.ಎನ್.ಯೋಗೇಶ್ ಅಧಿಕಾರ ವಹಿಸಿಕೊಂಡರು. ನೂತನ ಆಡಳಿತ ಮಂಡಳಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಬೋಸ್ ಪೆಮ್ಮಯ್ಯ, ನಿಕಟಪೂರ್ವ ಅಧ್ಯಕ್ಷ ಎ.ಎಸ್.ಮಹೇಶ್, ಕ್ಲಬ್‍ನ ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಎಚ್.ಎಂ.ಬಸಪ್ಪ, ನಿಕಟಪೂರ್ವ ಕಾರ್ಯದರ್ಶಿ ಎಂ.ಎ.ಹರೀಶ್, ಖಜಾಂಚಿ ಜಿ.ಟಿ.ಯೋಗೇಂದ್ರ ಉಪಸ್ಥಿತರಿದ್ದರು.