ಸೋಮವಾರಪೇಟೆ, ಜು.26: ಸ್ಥಳೀಯ ಕಲೆಗಳ ಪುನರುತ್ಥಾನದಿಂದ ಮಾತ್ರ ಸಂಸ್ಕøತಿಗೆ ಉಳಿವು. ಕೊಡಗಿನಲ್ಲಿ ಕನ್ನಡ ಮಾತನಾಡದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಹಲವಷ್ಟು ಮೂಲ ಕಲೆಗಳು ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ಉಳಿಸುವ ಕಾರ್ಯ ಆಗಬೇಕು. ಕನ್ನಡ ಭಾಷಾ ಸಾಹಿತ್ಯ ಉಳಿಯಬೇಕಾದರೆ ಸಾಹಿತಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕು ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ್ ಶಿಶಿಲ ಅಭಿಪ್ರಾಯಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಆಲೂರು ಸಿದ್ದಾಪುರದಲ್ಲಿ ಆಯೋಜಿಸಲಾಗಿದ್ದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.ಕೊಡಗಿನಲ್ಲಿ ಸರ್ವ ಸುಸಜ್ಜಿತ ಪುಸ್ತಕಾಲಯದ ಕೊರತೆ ಇದೆ ಎಂದು ತಮ್ಮ ಭಾಷಣದಲ್ಲಿ ಬೊಟ್ಟು ಮಾಡಿದ ಅವರು, ಇಲ್ಲಿ ಕನ್ನಡ ಮಾತನಾಡಲೂ ಬಾರದ ಹಲವಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಸಾಮಾಜಿಕ ಬದ್ಧತೆಯಿಂದಲೇ ಕನ್ನಡ ಬೆಳೆದಿದ್ದು, ಮನೆ ಮನೆಯಲ್ಲೂ ಕನ್ನಡ ಸಾಹಿತ್ಯದ ಸಮ್ಮೇಳನಗಳಾಗಬೇಕು. ಸಾಹಿತ್ಯವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮಹಾಕಾವ್ಯಗಳಿಗಿತ್ತು. ಇವುಗಳನ್ನು ಓದಿದರೆ ಸಾಹಿತ್ಯದ ಆಳ ಅರಿವಾಗುತ್ತಿತ್ತು. ಆದರೆ ಇಂದು ಹಲವಷ್ಟು ಮನೆಗಳಲ್ಲಿ ಮಹಾ ಕಾವ್ಯಗಳೇ ಇಲ್ಲ.