ಕುಶಾಲನಗರ, ಜು. 27: ಕಾಡಾನೆಯೊಂದು ತೀವ್ರ ಗಾಯಗೊಂಡು ಬಳಲುತ್ತಿರುವ ಘಟನೆ ಕುಶಾಲನಗರ ಸಮೀಪ ಆನೆಕಾಡು ಮೀಸಲು ಅರಣ್ಯದ ಬಳಿ ಕಂಡುಬಂದಿದೆ.

ಕಳೆದ ಕೆಲವು ದಿನಗಳಿಂದ ಅಂದಾಜು 25 ವರ್ಷ ಪ್ರಾಯದ ಗಂಡಾನೆ ತನ್ನ ಬಲಗಾಲು ಮುರಿದು ಹೋದ ಸ್ಥಿತಿಯಲ್ಲಿ ಅರಣ್ಯದೊಳಗೆ ಗೋಚರಿಸಿದ್ದು ಮಾಹಿತಿ ತಿಳಿದ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಸಿ.ಆರ್.ಅರುಣ್ ಮತ್ತು ಸಿಬ್ಬಂದಿಗಳು ಸಾಕಾನೆಗಳ ಸಹಾಯದೊಂದಿಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡು ನಿತ್ರಾಣದಲ್ಲಿರುವ ಆನೆಯನ್ನು ಆನೆಕಾಡು ಅರಣ್ಯ ಇಲಾಖಾ ಸಿಬ್ಬಂದಿಗಳ ವಸತಿಗೃಹ ಬಳಿ ಆರೈಕೆ ಮಾಡುತ್ತಿದ್ದು ಬಹುತೇಕ ಚೇತರಿಸಿಕೊಳ್ಳುತ್ತಿದೆ.

ಇಲ್ಲಿನ ಅರಣ್ಯದ ಒಳಭಾಗದಲ್ಲಿ ಘೀಳಿಡುತ್ತಿದ್ದ ಆನೆಯ ಸ್ಥಿತಿ ಕಂಡ ಅಧಿಕಾರಿ, ಸಿಬ್ಬಂದಿಗಳು ದುಬಾರೆಯ ಸಾಕಾನೆಗಳ ಸಹಾಯದೊಂದಿಗೆ ಆನೆಕಾಡು ಶಿಬಿರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡಾನೆಯ ಬಲಗಾಲಿನ ಮೂಳೆ ಸಂಪೂರ್ಣ ಮುರಿತಕ್ಕೆ ಒಳಗಾಗಿದ್ದು ಚಲನವಲನಕ್ಕೆ ಅಡ್ಡಿಯುಂಟಾಗಿದೆ. ಇದರಿಂದ ಆಹಾರ ಅರಸಿ ಹೋಗಲು ಸಂಕಷ್ಟಕ್ಕೆ ಸಿಲುಕಿದ ಆನೆ ಇತ್ತೀಚೆಗೆ ಸುರಿದ ಭಾರೀ ಮಳೆ ನಡುವೆ ಅರಣ್ಯದಲ್ಲಿ ಸಿಲುಕಿ ನಿತ್ರಾಣಕ್ಕೆ ಒಳಗಾಗಿತ್ತು. ವನ್ಯಜೀವಿ ತಜ್ಞ ಡಾ.ಮುಜೀಬ್ ಕಳೆದ 5 ದಿನಗಳಿಂದ ಆನೆಗೆ ಚಿಕಿತ್ಸೆ ನೀಡುತ್ತಿದ್ದು ಆನೆ ಬಹುತೇಕ ಸ್ಪಂದನ ನೀಡುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅರಣ್ಯದಲ್ಲಿ ಆಹಾರ ಅರಸಿಕೊಂಡು ಬರುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಮರದ ಬೇರಿಗೆ ಸಿಲುಕಿ ಕಾಲು ಮುರಿದಿರುವ ಸಾಧ್ಯತೆಯಿದೆ ಎಂದು ವಲಯ ಅರಣ್ಯಾಧಿಕಾರಿ ಸಂಶಯ ವ್ಯಕ್ತಪಡಿಸಿದ್ದಾರೆ. -ವರದಿ: ಚಂದ್ರಮೋಹನ್