ಮಡಿಕೇರಿ, ಜು. 27 : ರಾಜಧಾನಿ ಬೆಂಗಳೂರಿನಲ್ಲಿ ಹತ್ತು ತಿಂಗಳ ಹಿಂದೆ, ಕಳೆದ ಸೆ. 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ; ಇಲ್ಲಿನ ಶಿಕ್ಷಣ ಇಲಾಖೆ ಉದ್ಯೋಗಿ ಹಾಗೂ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಕಚೇರಿ ಸಹಾಯಕ ರಾಜೇಶ್ ಬಂಗೇರ ಬಂಧನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಪಾಲೂರು ನಿವಾಸಿಯಾಗಿರುವ ರಾಜೇಶ್ ಬಂಗೇರ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ತನಿಖಾ ತಂಡವು; ವೀಣಾ ಅಚ್ಚಯ್ಯ ಅವರ ಕಚೇರಿಯಲ್ಲಿದ್ದ ಆತನ ಹಾಜರಾತಿ ಪುಸ್ತಕವನ್ನು ವಶಕ್ಕೆ ಪಡೆದು ಕೊಂಡಿರುವದಾಗಿ ಗೊತ್ತಾಗಿದೆ. ಅಲ್ಲದೆ ಮಹದೇವಪೇಟೆಯ ಮದ್ದುಗುಂಡು ಹಾಗೂ ಬಂದೂಕು ಮಾರಾಟ ಮಳಿಗೆಗಳಿಗೆ ರಾಜೇಶ್ ಸಹಿತ ತೆರಳಿರುವ ತನಿಖಾ ತಂಡವು ಅಲ್ಲಿ ಈತ ಮದ್ದುಗುಂಡುಗಳನ್ನು ಖರೀದಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ.ಈ ವೇಳೆ ರಾಜೇಶ್ ಕಳೆದ 2013 ರಿಂದ ಇದುವರೆಗೆ ಖರೀದಿಸಿರುವ .32 ಪಿಸ್ತೂಲ್ ಗುಂಡುಗಳ ಬಗ್ಗೆ ವಿವರ ಮಾಹಿತಿ ಕಲೆ ಹಾಕಿದ್ದು, ಈತನ ಹೆಸರಿನಲ್ಲಿ ಖರೀದಿಸಲ್ಪಟ್ಟಿದ್ದ ಗುಂಡುಗಳಿಗೆ ಸಂಬಂಧಿಸಿದ ಹಣ ಪಾವತಿ ರಶೀದಿಯ ನಕಲುಗಳನ್ನು ವಶಕ್ಕೆ ಪಡೆದಿರುವದಾಗಿ ಮೂಲಗಳು ತಿಳಿಸಿವೆ.
ಇನ್ನೊಂದು ಮೂಲದ ಪ್ರಕಾರ ರಾಜೇಶ್ ಬೇರೊಂದು ಮಳಿಗೆ ಯಿಂದ ಐದು ಏರ್‍ಗನ್‍ಗಳನ್ನು ಕೂಡ ಖರೀದಿಸಿರುವ ಕುರಿತು ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುವ ಮೂಲಕ ದಾಖಲಾತಿ ಗಳನ್ನು ಪರಿಶೀಲನೆ ಮಾಡಿ ಹೊಂದಿ ಕೊಂಡಿರುವ ಮಾಹಿತಿಯಿದೆ. ಈತ ನೀಡಿರುವ ಸುಳಿವಿನ ಮೇರೆಗೆ ತನಿಖಾ ತಂಡವು ಜಿಲ್ಲೆಯ ವಿವಿಧೆಡೆ ಕರೆದೊಯ್ದು ಸಾಕಷ್ಟು ನಿಗೂಢ ವಿಷಯ ಕಲೆ ಹಾಕಿರುವದಾಗಿ ಗೊತ್ತಾಗಿದೆ.
ರೈಫಲ್ ಶೂಟಿಂಗ್ ತರಬೇತಿ : ಪೊಲೀಸ್ ಇಲಾಖೆಯ ನಾಗರಿಕರಿಗೆ ಸ್ವರಕ್ಷಣೆಗಾಗಿ ನೀಡುವ ಶೂಟಿಂಗ್ ತರಬೇತಿಯಲ್ಲಿಯೂ ರಾಜೇಶ್ ಬಂಗೇರ ಒಂದು ವಾರ ಪಾಲ್ಗೊಂಡು ರೈಫಲ್ ಶೂಟಿಂಗ್ ಶಿಕ್ಷಣ ಹೊಂದಿರುವದು ತನಿಖೆಯ ಸಂದರ್ಭ ದೃಢಪಟ್ಟಿದೆ. 22.11.2017 ರಿಂದ 27.11.2017ರ ತನಕ ಒಂದು ವಾರದ ಕಾಲ ಪೊಲೀಸ್ ಇಲಾಖೆ ನೀಡಿದ ಸಿವಿಲ್ ರೈಫಲ್ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾನೆ ಎಂದು ಗೊತ್ತಾಗಿದೆ.
ಮಾತ್ರವಲ್ಲದೆ, 2008ರಲ್ಲಿ ಒಂದು ಪಿಸ್ತೂಲ್ ಹಾಗೂ ಒಂದು ಎಸ್.ಬಿ.ಬಿ.ಎಲ್. ಕೋವಿಯನ್ನು ಅಧಿಕೃತ ಪರವಾನಗಿಯೊಂದಿಗೆ ಆತ ಹೊಂದಿಕೊಂಡಿದ್ದಾನೆ. ಬೆಂಗಳೂರಿ ನಿಂದ ಜಿಲ್ಲೆಯಲ್ಲ್ಲಿ ತನಿಖೆ ಕೈ ಗೊಂಡಿರುವ ತಂಡವು, ಈತನ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದೆ.
ತಾ. 20ರಂದು ವಶಕ್ಕೆ : ‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ತಾ. 20ರಂದು ಮಧ್ಯಾಹ್ನದ ಸುಮಾರಿಗೆ ಗೌರಿ ಹತ್ಯೆ ಪ್ರಕರಣದ ತನಿಖಾ ತಂಡ ರಾಜೇಶ್‍ನನ್ನು ವಶಕ್ಕೆ ಪಡೆದಿದ್ದು, ಇದುವರೆಗೆ ಸುದೀರ್ಘ ಮಾಹಿತಿ ಪಡೆಯುವದರೊಂದಿಗೆ ಕೃತ್ಯಕ್ಕೆ ಪೂರಕ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಪ್ರಯತ್ನ ಮುಂದುವರೆಸಿದೆ.