ಮಡಿಕೇರಿ, ಜು. 27: ತೀವ್ರ ಮಳೆ-ಗಾಳಿಯಿಂದಾಗಿ ರೋಬಸ್ಟಾ ಕಾಫಿಗೆ ಹಾನಿ ಉಂಟಾಗಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ವೀರಾಜಪೇಟೆ ಕಾಫಿ ಮಂಡಳಿಯ ಉಪನಿರ್ದೇಶಕರು ಹೇಳಿಕೆ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಕೊಡಗಿನಲ್ಲಿ ಎಡೆಬಿಡದೆ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಪ್ರಮುಖ ಬೆಳೆಯಾದ ಕಾಫಿಗೆ ಅನೇಕ ಬಗೆಯಿಂದ ಹಾನಿ ಸಂಭವಿಸುತ್ತಿದೆ. ಕಳೆದ ಸಾಲಿಗೆ ಹೋಲಿಸಿದಾಗ ಈಗಾಗಲೇ ಶೇ. 75 ರಿಂದ ಶೇ. 100 ಕ್ಕಿಂತ ಹೆಚ್ಚು ಮಳೆಯಾಗಿ ಶೀತದ ವಾತಾವರಣ ಸೃಷ್ಟಿಯಾಗಿದೆ.ಈ ಅಹಿತಕರ ಹವಾಮಾನ ವೈಪರಿತ್ಯದಿಂದ, ವಿಶೇಷವಾಗಿ ರೋಬಸ್ಟಾ ಕಾಫಿಯಲ್ಲಿ ಕೊಳೆ ರೋಗ (ಃಟಚಿಛಿಞ ಡಿoಣ) ಮತ್ತು ತೊಟ್ಟು ಕೊಳೆ ರೋಗ ಉಲ್ಬಣವಾಗಿದ್ದು, ಕಾಯಿಗಳು ಬಲಿಯುವ ಮುನ್ನವೇ ಉದುರುತ್ತಿವೆ. ಬಿಡುವಿಲ್ಲದ ಮುಂಗಾರು ಮಳೆ, ಶೇ. 95-100 ರಷ್ಟು ವಾತಾವರಣದಲ್ಲಿನ ತೇವಾಂಶ, ತೋಟದಲ್ಲಿನ ದಟ್ಟವಾದ ನೆರಳು, ಗಾಳಿಯ ಹೊಡೆತಕ್ಕೆ ಸಿಗುವ ಕೊಲ್ಲಿಯ (ವ್ಯಾಲಿ) ಅಕ್ಕ ಪಕ್ಕದ ತೋಟಗಳು, ಮಂಜು ಬೀಳುವ ಪ್ರದೇಶದಲ್ಲಿನ ತೋಟಗಳು, ಕೇವಲ ಸಿಲ್ವರ್ ಮರಗಳನ್ನು ನೆರಳಾಗಿ ಬೆಳೆಸಿರುವ ತೋಟಗಳಲ್ಲಿ ಕೊಳೆ ರೋಗವು ಹೆಚ್ಚಾಗಿ ಕಂಡುಬರುತ್ತದೆ.
ರೋಗದ ಲಕ್ಷಣಗಳು: ಈ ರೋಗವು ಕೊಳೆರೋಗ ನಾಕ್ಷಿಯಾ ಎಂಬ ಶಿಲೀಂದ್ರದಿಂದ ಬರುತ್ತದೆ. ಮೊದಲಿಗೆ ಎಲೆಯ ತಳಭಾಗದಲ್ಲಿ ಬಿಳಿ ಪುಡಿಯಂತೆ ಅವರಿಸಿಕೊಂಡು, ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಿ ಎಲೆಗಳು ಹಾಗೂ ಕೊಂಬೆಗಳು ಕೊಳೆಯಲು ಪ್ರಾರಂಭವಾಗುತ್ತದೆ. ಆದ್ದರಿಂದ ಕಾಫಿ ಬೆಳೆಗಾರರು ತಕ್ಷಣವೇ ಈ ಕೆಳಗೆ ಸೂಚಿಸಿರುವ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಹಾನಿಯಾಗುವದರಿಂದ ತಪ್ಪಿಸಿಕೊಳ್ಳಲು ಸಲಹೆ ನೀಡಲಾಗಿದೆ.
1. ಸರಿಯಾದ ಗಿಡಕಸಿ ಕ್ರಮಗಳನ್ನು ಅನುಸರಿಸುವದು.
2. ನಿಗಧಿತ ಪ್ರಮಾಣದಲ್ಲಿ ನೆರಳನ್ನು ಉಳಿಸಿಕೊಳ್ಳುವದು.
3. ಕಳೆಯನ್ನು ಹತೋಟಿಯಲ್ಲಿಡುವದು.
4. ತೋಟದಲ್ಲಿ ತೊಟ್ಟಿಲು ಗುಂಡಿಗಳನ್ನು ತೆಗೆಯುವದು.
5. ಕಾಫಿ ಗಿಡದ ಬುಡದಲ್ಲಿನ ತರಗನ್ನು ಬಿಡಿಸಿ, ಗಾಳಿಯಾಡುವಂತೆ ಮಾಡುವದು.
6. ಕಾಫಿಗಿಡದ ಮೇಲೆ ಬಿದ್ದಂತಹ ಸಿಲ್ವರ್ ಮರಗಳ ಎಲೆ/ತರಗನ್ನು ತೆಗೆಸುವದು.
7. ರೋಗ ಕಂಡುಬಂದ ಎಲೆ/ಕಾಯಿಗಳನ್ನು ಕಿತ್ತು ನಾಶಪಡಿಸುವದು.
8. ಅಗಸ್ಟ್ನಲ್ಲಿ ಬಾವಿಸ್ಟಿನ್ 120 ಗ್ರಾ 200 ಲೀ ನೀರಿನಲ್ಲಿ ಬೆರೆಸಿ ರೋಗ ಹೊಂದಿರುವ ಗಿಡಗಳಿಗೆ ಸಿಂಪಡಿಸುವದು.
9. ಶೇ. 1 ರಷ್ಟು ಬೋರ್ಡೊದ್ರಾವಣವನ್ನು 1 ಕೆ. ಜಿ. ಯೂರಿಯಾ + 750 ಗ್ರಾಂ ಮ್ಯುರಿಯೇಟ್ ಆಫ್ಪೊಟ್ಯಾಷ್ (ಒಔP) + 500 ಗ್ರಾಂ ಸತುವಿನ ಸಲ್ಫೇಟ್ + 75 ಮಿ. ಲಿ. ಪ್ಲಾನೋಪಿಕ್ಸನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ತಯಾರಿಸಿ ಸಿಂಪಡಣೆ ಮಾಡಬೇಕು.
ಬೆಳೆಗಾರರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು.