ಕೂಡಿಗೆ, ಜು. 27: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ 18-19ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಯು ಗೊಂದಿಬಸವನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯು ಪ್ರಾರಂಭವಾಗುತ್ತಿದ್ದಂತೆ ಶಾಲೆ ನಡೆಯುತ್ತಿದ್ದರೂ ಸಹ ವಿದ್ಯಾರ್ಥಿಗಳಿಗೆ ತೊಂದರೆ ನೀಡಿ ಕಾರ್ಯಕ್ರಮ ನಡೆಸುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಸಭೆಗೆ ತಿಳಿಸಿದರು. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಮೈದಾನದಲ್ಲಿ ಸಭೆ ನಡೆಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು. ನಂತರ ಗ್ರಾ.ಪಂ. ಮಾಜಿ ಸದಸ್ಯ ರಾಜೇಶ್ ಸಭೆಯಲ್ಲಿ ಮಾತನಾಡಿ, ಗ್ರಾಮ ಸಭೆಗೆ ನೂರಾರು ಗ್ರಾಮಸ್ಥರು ನಿವೇಶನ ಮತ್ತು ವಸತಿ ಯೋಜನೆಯಲ್ಲಿ ನಮಗೆ ನಿವೇಶನ ನೀಡುತ್ತಾರೆ ಹಾಗೂ ತಮಗೆ ನಿವೇಶನ ನೀಡಬೇಕೆಂದು ಅರ್ಜಿ ಸಲ್ಲಿಸಲು ಬಂದಿದ್ದಾರೆ.

ಆದ್ದರಿಂದ ನಿವೇಶನವನ್ನು ಖರೀದಿಸುವ ಕೆಲಸಕ್ಕೆ ಆಡಳಿತ ಮಂಡಳಿಯವರು ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕುತ್ತರಿಸಿದ ಕಂದಾಯ ಅಧಿಕಾರಿ ಗೌತಮ್, ಈಗಾಗಲೇ 5/1 ರಲ್ಲಿ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಈ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ವಸತಿ ರಹಿತರಿಗೆ ಜಾಗವನ್ನು ನೀಡಬೇಕೆಂದು ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಒತ್ತಾಯಿಸಿದರು.

ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಕ್ರಮ ಕೈಗೊಂಡು ಹಣ ಕಾದಿರಿಸಿ ಅತೀ ಶೀಘ್ರದಲ್ಲೇ ತಡೆಗೋಡೆ ನಿರ್ಮಿಸಲು ತೀರ್ಮಾನಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ವೈಜ್ಞಾನಿಕವಾಗಿ ಪ್ರಾರಂಭಿಸಲು ಹಾಗೂ ಈಗಾಗಲೇ 5/1 ಪಿ2 ನಲ್ಲಿ ಜಾಗ ಮಂಜೂರಾಗಿದ್ದು, ಗ್ರಾಮ ಸಭೆಯ ಅನುಮತಿಯನ್ನು ಪಡೆಯಲಾಗಿದೆ. ಸಭೆಯಲ್ಲಿದ್ದ ಅನೇಕ ಗ್ರಾಮಸ್ಥರು ಗ್ರಾಮ ವ್ಯಾಪ್ತಿಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡುವಂತೆ ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಈ ಸಂದರ್ಭ ವಸತಿ ಯೋಜನೆಗೆ ಸಂಬಂಧಿಸಿದಂತೆ 75 ಜನರು ಅರ್ಜಿ ನೀಡಿದರು. 370 ನಿವೇಶನ ರಹಿತರು ಅರ್ಜಿಯನ್ನು ಸಲ್ಲಿಸಿದರು. ಸಭೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅನೇಕ ಕ್ರಿಯಾ ಯೋಜನೆಗಳ ಬಗ್ಗೆ ಸಭೆಯಲ್ಲಿ ಒಪ್ಪಿಗೆ ದೊರೆಯಿತು. ಮಿಷನ್ ಅಂತ್ಯೋದಯ ಸಂಬಂಧ ಚರ್ಚೆಯ ನಂತರ ಅನುಮೋದನೆ ನಡೆಯಿತು.

ಸಭೆಗೆ ಬರುವ ನೋಡೆಲ್ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಸಮರ್ಪಕವಾದ ಮಾಹಿತಿಗಳನ್ನು ಸಂಗ್ರಹಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಹಿತಿ ನೀಡಿ ವಿವಿಧ ಇಲಾಖೆಗಳಲ್ಲಿ ಚರ್ಚೆ ನಡೆದಿರುವದರಿಂದ ಸಂಬಂಧಪಟ್ಟ ಇಲಾಖೆಯವರಿಗೆ ಸಭೆಯಲ್ಲಿ ನಡೆಸಿದ ಚರ್ಚೆಗಳ ಬಗ್ಗೆ ಅರಿವಾಗಲು ಮಾಹಿತಿಯನ್ನು ತಿಳಿಸಿ ಕ್ರಮ ಕೈಗೊಳ್ಳಲು ಅನುವಾಗುವಂತೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಗಳನ್ನು ತಿಳಿಸಿದರು. ಸಭೆಯಲ್ಲಿ ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯೆ ಆರ್. ಪುಷ್ಪಾ, ಉಪಾಧ್ಯಕ್ಷ ತಾರಾನಾಥ್, ಅಭಿವೃದ್ಧಿ ಅಧಿಕಾರಿ ರಾಜಶೇಖರ್, ತಾಲೂಕು ಪಂಚಾಯಿತಿ ಲೆಕ್ಕಾಧಿಕಾರಿ ಸಿ. ನಾರಾಯಣ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.