ಬೆಂಗಳೂರು, ಜು. 27: ನಿವೃತ್ತಿ ಹೊಂದುವ ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧರ ಕುಟುಂಬಗಳಿಗೆ ಮೂರು ತಿಂಗಳ ಒಳಗಾಗಿ ಸಂಪೂರ್ಣ ಪರಿಹಾರ ಹಾಗೂ ಇತರ ಸೌಲಭ್ಯ ಒದಗಿಸಿಕೊಡಲು ನೂತನ ಕಾನೂನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಬಳಿಕ ಮಾತನಾಡಿದರು.1999ರಲ್ಲಿ ಕಾಂಗ್ರಿಲ್ ಯುದ್ಧದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಇವರ ಸೇವೆ ಹಾಗೂ ತ್ಯಾಗ ಸ್ಮರಣಾರ್ಥ. ಇವರನ್ನು ನೆನೆದು ಗೌರವ ಸಲ್ಲಿಸಲು ಈ ದಿನ ಆಚರಿಸುತ್ತೇವೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬದುಕಿರುವ ಸಾಕಷ್ಟು ಯೋಧರು ನಮ್ಮೊಟ್ಟಿಗಿದ್ದಾರೆ. ಅವರಿಗೂ ಕೃತಜ್ಞತೆ ಸಲ್ಲಿಸುವೆ. ಇಂದಿನ ಯುವ ಪೀಳಿಗೆಗೆ ಹುತಾತ್ಮ ಯೋಧರು ಆದರ್ಶರಾಗಿದ್ದಾರೆ ಎಂದರು. ಗಡಿ ಕಾಯುವ ಯೋಧರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ. ಇವರಿಗೆ ಪರಿಹಾರ ನೀಡುವ ಕಾರ್ಯ ತಡವಾಗಬಾರದು. ಅದಕ್ಕಾಗಿಯೇ ಸೈನಿಕ ವೆಲ್‍ಫೇರ್ ಬೋರ್ಡ್ ತೆರೆಯಲಾಗಿದೆ. ಆದರೂ ಪರಿಹಾರ ತಡವಾಗುವ ಆರೋಪವಿದೆ. ಹೀಗಾಗಿ ನೂತನ ಕಾನೂನು ತರಲು ಹೊರಟಿದ್ದೇವೆ.

ಕನಿಷ್ಟ ಮೂರು ತಿಂಗಳ ಒಳಗಾಗಿ ನಿವೃತ್ತ ಯೋಧರು ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧ ಕುಟುಂಬಗಳಿಗೆ ಪರಿಹಾರ ಹಾಗೂ ಇತರ ಸೌಕರ್ಯ ಒದಗಿಸಿಕೊಡುವ ಕೆಲಸವಾಗುವ ನಿಟ್ಟಿನಲ್ಲಿ ಕಾನೂನು ರೂಪಿಸ ಲಾಗುವದು ಎಂದರು.

-ಬಿ.ಜಿ. ರವಿಕುಮಾರ್