ಶ್ರೀಮಂಗಲ, ಜು. 27: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಮೇ ತಿಂಗಳಲ್ಲಿ ರಸ್ತೆಗೆ ಹಾಕಿದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಕಾಮಗಾರಿ ಕಳಪೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾಡಗರಕೇರಿ ಗ್ರಾಮದ ಕೂಟಿಯಾಲ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ಚೋನಿರ ಕುಟುಂಬಸ್ಥರ ರಸ್ತೆಗೆ ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ರೂ. 3 ಲಕ್ಷ ಮಳೆ ಹಾನಿ ಅನುದಾನದಲ್ಲಿ ಡಾಂಬರು ಹಾಕಲಾಗಿತ್ತು. ಆದರೆ, ಒಂದೂವರೆ ತಿಂಗಳ ಅವಧಿಯಲ್ಲಿ ಈ ರಸ್ತೆಯ ಡಾಂಬರು ಕಿತ್ತು ಹೋಗಿದ್ದು ಅತೀ ಹೆಚ್ಚು ಮಳೆ ಸುರಿಯುವ ಈ ವ್ಯಾಪ್ತಿಗೆ ಸೂಕ್ತ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಿಲ್ಲ, ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಈ ರಸ್ತೆಯನ್ನು ಗ್ರಾಮಸ್ಥರೊಂದಿಗೆ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ವೀಕ್ಷಿಸಿ ರಸ್ತೆ ಕಾಮಗಾರಿ ಕಳಪೆಯಾಗಿದೆ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಮಳೆಗಾಲ ಹಿಡಿಯುವ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿ ಮಾಡುವದರಿಂದ ರಸ್ತೆ ಹಾಳಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳೊಳಗೆ ಡಾಂಬರು ರಸ್ತೆ ಕಾಮಗಾರಿ ಮಾಡಬೇಕು ಮತ್ತು ಬಹುತೇಕ ಕಡೆಗೆ ಕಾಂಕ್ರೀಟ್ ರಸ್ತೆ ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ರಸ್ತೆ ಮುಂದುವರೆದು ಬಾಡಗರಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿಗೆ ಇನ್ನೂ ಸೋಲಿಂಗ್ ಹಾಗೂ ಡಾಂಬರು ಆಗಿಲ್ಲ. ಮಣ್ಣು ರಸ್ತೆಯ ಮೂಲಕವೇ ಸಾಗಬೇಕಾಗಿದೆ ಎಂದು ಚೋನಿರ ಮಧು, ಸುಬ್ರಮಣಿ ಅಸಮಾದಾನ ವ್ಯಕ್ತಪಡಿಸಿದರು.