ಮಡಿಕೇರಿ, ಜು. 27 : ಕಾಲೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಸಂಪರ್ಕಿಸಲು ಇರುವ ರಸ್ತೆ, ದೇವಸ್ತೂರು ಸೇತುವೆ ಬಳಿ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಶೀಘ್ರ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು ಕಪ್ಪು ಪಟ್ಟಿ ಧರಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ‘ಕರಾಳ ದಿನ’ವನ್ನು ಆಚರಿಸಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೂರು ಗ್ರಾಮಸ್ಥರಾದ ಎ.ಟಿ.ಮಾದಪ್ಪ ಮಡಿಕೇರಿಯಿಂದ ಕೆ.ನಿಡುಗಣೆಗಾಗಿ ಮಾಂದಲ್ಪಟ್ಟಿಗೆ ಹೋಗುವ ರಸ್ತೆಯ ದೇವಸ್ತೂರು ಸೇತುವೆ ಹತ್ತಿರದಿಂದ ಮುಂದೆ ಕಾರೇರ ಮನೆಯವರೆಗೆ ಅಂದಾಜು 2 ಕಿ.ಮೀ.ನಷ್ಟು ರಸ್ತೆ ಹೊಂಡ, ಗುಂಡಿಗಳಿಂದ ಕೂಡಿ ವಾಹನ ಸಂಚಾರವೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ಅವ್ಯವಸ್ಥೆಯಿಂದಾಗಿ ಕಾಲೂರು ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರೈತರು, ಕಾರ್ಮಿಕ ಸಮೂಹವೂ ತೊಂದರೆಗೆ ಒಳಗಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದ್ದರೂ ಯಾವದೇ ಸ್ಪಂದನ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 2 ವರ್ಷಗಳಿಂದ ಇರುವ ಈ ಗುಂಡಿಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಂಜಿನಿಯರುಗಳಿಗೆ ತಿಳಿದಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ಗಾಳಿಬೀಡು ಗ್ರಾ.ಪಂ. ಅಧ್ಯಕ್ಷರಿಗ ಅಭಿವೃದ್ಧಿ ಬಗ್ಗೆ ನೈಜ ಕಾಳಜಿ ಇಲ್ಲವೆಂದು ಟೀಕಿಸಿದರು.

ಗ್ರಾಮಸ್ಥರಾದ ರಾಜಾ ತಮ್ಮಯ್ಯ ಮಾತನಾಡಿ, ಗ್ರಾಮದ ರಸ್ತೆ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೂರು ಪೊನ್ನಪ್ಪ, ಅಯ್ಯಪ್ಪ ಹಾಗೂ ಮೇದಪ್ಪ ಉಪಸ್ಥಿತರಿದ್ದರು.